ಬೆಳಗಾವಿಯ ಶಹಾಪುರದಲ್ಲಿ ಶ್ರಾವಣ ಮಾಸದ ಸಂಭ್ರಮ ಗರಿಗೆದರಿದ್ದು, ಶ್ರೀ ಕಾಳಿಕಾ ದೇವಿಯ ರಜತ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಇಂದು ಸಿದ್ಧಿವಿನಾಯಕ ದೇವಸ್ಥಾನದಿಂದ ವಿಜೃಂಭಣೆಯ ಮೆರವಣಿಗೆ ಆರಂಭಗೊಂಡಿತು. ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಈ ಮೆರವಣಿಗೆಗೆ ಚಾಲನೆ ನೀಡಿದರು.

ಬೆಳಗಾವಿ ಶಹಾಪುರದ ಗಣೇಶಪುರ ಗಲ್ಲಿಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಲಾಗಿರುವ ಶ್ರೀ ಕಾಳಿಕಾ ದೇವಿಯ ರಜತ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಚಂಡಿಕಾ ಹೋಮದ ಧಾರ್ಮಿಕ ಮಹೋತ್ಸವವು ಇಂದು ಸಿದ್ಧಿವಿನಾಯಕ ದೇವಸ್ಥಾನದಿಂದ ಆರಂಭವಾದ ಭವ್ಯ ಮೆರವಣಿಗೆಯೊಂದಿಗೆ ವಿಧ್ಯುಕ್ತವಾಗಿ ಚಾಲನೆ ಪಡೆಯಿತು. ಶಾಸಕ ಅಭಯ್ ಪಾಟೀಲ್ ಅವರು ಚಾಲನೆಯನ್ನು ನೀಡಿದರು.
ಪೂಜ್ಯಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯ ಹಾಗೂ ಶ್ರೀ ಶಂಕರಚಾರ್ಯ ಗುರುನಾಥಾಚಾರ್ಯ ಕಡ್ಲಾಸ್ಕರ ಪಂಡಿತರ ಪೌರೋಹಿತ್ಯದಲ್ಲಿ ಜರುಗುತ್ತಿರುವ ಈ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಆಗಸ್ಟ್ 29ರಂದು ದೇವ ಪ್ರಾರ್ಥನೆ, ಗುರು-ಗಣಪತಿ ಪೂಜೆ, ನವಗ್ರಹ ಪೀಠದೇವತಾ ಪ್ರತಿಷ್ಠೆ ಹಾಗೂ ವಿವಿಧ ಹೋಮಗಳು ನೆರವೇರಲಿವೆ.
ಕಾರ್ಯಕ್ರಮದ ಮುಕ್ತಾಯದ ದಿನವಾದ ಆಗಸ್ಟ್ 30ರಂದು ಚಂಡಿಕಾ ಹೋಮ, ಪ್ರಾಣಪ್ರತಿಷ್ಠೆ, ಮಹಾಮಂಗಳಾರತಿ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಈ ಸಮಾರಂಭದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾದ ಅಭಯ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಶ್ವಕರ್ಮ ಸಮಾಜದ ಬಾಂಧವರಿಗೆ ವಿಶೇಷ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ತಿಳಿಸುತ್ತಾ, ಬೆಳ್ಳಿಯ ದೇವಿಯ ಮೂರ್ತಿಯ ರೂಪದಲ್ಲಿ ದೇವಿ ಪ್ರತಿಯೊಬ್ಬರ ಜೀವನದಲ್ಲಿ ಬೆಳ್ಳಿ-ಬಂಗಾರದ ರೂಪದಲ್ಲಿ ಆಗಮಿಸಿ ಆಶೀರ್ವದಿಸಲಿ ಎಂದು ಆ ದೇವಿಯಲ್ಲಿ ಪ್ರಾರ್ಥಿಸುವುದಾಗಿ ಮಾತನಾಡಿದ್ದಾರೆ.
ಈ ವೇಳೆ ಸಮಾಜದ ಪ್ರಮುಖರು ಕಾರ್ಯಕ್ರಮದ ಮಾಹಿತಿಯನ್ನು ಇನ್ ನ್ಯೂಸ್’ಗೆ ತಿಳಿಸಿದರು.
ಸಮಾಜದ ಪ್ರಮುಖರಾದ ಅಶೋಕ ಸಾವಗಾಂವ, ಪ್ರಭಾಕರ ಬಡಿಗೇರ, ರಾಜೀವ. ಪಂಡಿತ ಹಾಗೂ ಸೋಮಶೇಖರ ಸುತಾರ ಸೇರಿದಂತ ಇನ್ನುಳಿದ ಗಣ್ಯರು ಭಾಗಿಯಾಗಿದ್ಧರು.
