ರಕ್ಷಾ ಬಂಧನವೆಂದರೆ ಕೇವಲ ಅಣ್ಣ-ತಂಗಿಯರ ಬಾಂಧವ್ಯವಲ್ಲ, ಸಮಾಜಕ್ಕಾಗಿ ಶ್ರಮಿಸುವ ಪ್ರತಿಯೊಬ್ಬರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವ ಅಪರೂಪದ ಹಬ್ಬ. ಬೆಳಗಾವಿಯ ಕ್ಯಾಂಟೋನ್ಮೆಂಟ್ ಬೋರ್ಡ್ ಮರಾಠಿ ಪ್ರಾಥಮಿಕ ಶಾಲೆಯ ಮಕ್ಕಳು ಈ ಮಾತನ್ನು ಅಕ್ಷರಶಃ ಸಾಬೀತುಪಡಿಸಿದ್ದಾರೆ

ಬೆಳಗಾವಿಯ ಕ್ಯಾಂಪ್ ಪ್ರದೇಶದ ಕ್ಯಾಂಟೋನ್ಮೆಂಟ್ ಬೋರ್ಡ್ ಮರಾಠಿ ಪ್ರಾಥಮಿಕ ಶಾಲೆ ಹಾಗೂ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ಸಂಯುಕ್ತ ಆಶ್ರಯದಲ್ಲಿ ರಕ್ಷಾಬಂಧನವನ್ನು ವಿನೂತನವಾಗಿ ಆಚರಿಸಲಾಯಿತು. ಶಾಲೆಯ ಸುಮಾರು 350 ವಿದ್ಯಾರ್ಥಿಗಳು ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದ ಯೋಧರು, ಭಾರತೀಯ ಸೇನಾ ಸಿಬ್ಬಂದಿ ಮತ್ತು ಕ್ಯಾಂಟೋನ್ಮೆಂಟ್ ಬೋರ್ಡ್ನ ಸ್ವಚ್ಛತಾ ಕಾರ್ಮಿಕರಿಗೆ 1000ಕ್ಕೂ ಹೆಚ್ಚು ರಾಖಿಗಳನ್ನು ಕಟ್ಟಿ ಗೌರವ ಸಲ್ಲಿಸಿದರು. ಜೊತೆಗೆ ಸಮೃದ್ಧ ಫೌಂಡೇಶನ್ನ ವಿಶೇಷ ಮಕ್ಕಳನ್ನು ಆಹ್ವಾನಿಸಿ, ಆರತಿ ಬೆಳಗಿ ರಾಖಿ ಕಟ್ಟುವ ಮೂಲಕ ಭೇದಭಾವವಿಲ್ಲದ ಮಾನವೀಯತೆಯ ಸಂದೇಶ ಸಾರಿದರು.
ನಂತರ ಲೆಲೆ ಮೈದಾನದಲ್ಲಿ ನಡೆದ ಹಾಕಿ ಪಂದ್ಯಾವಳಿಯ ಕ್ರೀಡಾಪಟುಗಳಿಗೂ ರಾಖಿ ಕಟ್ಟಿ ಸಿಹಿ ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದಾಮ್ ಹರಿವಿಜಯ್ ಮಂಚಲ್ವಾರ್ ಹಾಗೂ ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದ ಸಂತೋಷ ದರೇಕರ ಸೇರಿದಂತೆ ಪ್ರಮುಖರು ಕೈಜೋಡಿಸಿದ್ದರು. “ಮಾನವೀಯತೆಗಿಂತ ದೊಡ್ಡ ಬಂಧನ ಮತ್ತೊಂದಿಲ್ಲ” ಎಂಬ ಈ ಪುಟ್ಟ ಮಕ್ಕಳ ದೊಡ್ಡ ಸಂದೇಶ ಸಮಾಜಕ್ಕೆ ಮಾದರಿಯಾಗಿದೆ.
