ಬೆಳಗಾವಿಯಲ್ಲಿ ಜಾತಿ-ಮತಗಳ ಹಂಗಿಲ್ಲದೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಈದ್ ಎ ಮಿಲಾದ್ ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಅಲ್ ಫಲಾ ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಸಮಾಜಕ್ಕೆ ಮಾದರಿಯಾದ ಸಂದೇಶ ಸಾರಲಾಗಿದೆ.


ಬೆಳಗಾವಿ ನಗರದಲ್ಲಿ ಈದ್ ಎ ಮಿಲಾದ್ ಹಬ್ಬವನ್ನು ಸೌಹಾರ್ದತೆ ಹಾಗೂ ಪರಸ್ಪರ ಪ್ರೀತಿಯ ಸಂಕೇತವಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಅಲ್ ಫಲಾ ಸಂಘಟನೆಯ ಪ್ರಮುಖರಾದ ಅಬ್ದುಲ್ ಖಾದರ್ ಘೀವಾಲೆ ಅವರ ನೇತೃತ್ವದಲ್ಲಿ, ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ ಗಣ್ಯರ ಸಹಕಾರದೊಂದಿಗೆ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವಿಧ ವಾರ್ಡ್ಗಳ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿ, ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಖಾದರ್ ಘೀವಾಲೆ, ಹಬ್ಬಗಳು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ, ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಿದಾಗ ಮಾತ್ರ ಅರ್ಥಪೂರ್ಣವಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಫೈಜಾನ್ ಭಾಯಿ, ಸುರೇಶ ಕಂಗ್ರಾಳಕರ, ಜುಬೇರ್ ಮುಗುಟ್ಖಾನ್ ಹಾಗೂ ಅಬ್ದುಲ್ ಗಫೂರ್ ಘೀವಾಲೆ ಸೇರಿದಂತೆ ಹಲವು ಗಣ್ಯರು ಹಾಗೂ ಸಮಾಜ ಸೇವಕರು ಉಪಸ್ಥಿತರಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
