ವಿಜಯಪುರ ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿಯ ಶವಗಳು ಪತ್ತೆಯಾಗಿರುವ ಘಟನೆ ವಿಜಯಪುರದಲ್ಲಿ ಆತಂಕಕ್ಕೆ ಕಾರಣವಾಗಿದೆ.


ಮೃತರನ್ನು ವಿಜಯಪುರ ತಾಲೂಕಿನ ತೊರವಿ ಗ್ರಾಮದ ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ (10), ವಿಕಾಸ (5) ಹಾಗೂ ಸಾನಿಕಾ (7) ಎಂದು ಗುರುತಿಸಲಾಗಿದೆ. ಆರು ಮಂದಿಯೂ ಆಗಸ್ಟ್ 24ರಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶೋಭಾ ಅವರು ಪತಿ ಮಲಕಾರಿ ಭೀಮರಾಯ ಜಾಲಗೇರಿ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಹೊರಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಭೂತನಾಳ ಕೆರೆಯಲ್ಲಿ ಆರು ಮಂದಿಯ ಶವಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಕೆರೆಯ ಅಂಚಿನಲ್ಲಿ ಶವಗಳು ತೇಲಿ ಬಂದಿರುವುದನ್ನು ಗಮನಿಸಿದ ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಿಂದ ಶವಗಳನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆ ಪೂರ್ಣಗೊಂಡ ಬಳಿಕ ಆರು ಮಂದಿಯ ಸಾವಿನ ನಿಖರ ಕಾರಣ ತಿಳಿದುಬರಲಿದೆ.

