ವಿಜಯಪುರದ ಭೂತನಾಳ ಕೆರೆ… ನಿನ್ನೆವರೆಗೂ ಜನರ ಪಾಲಿಗೆ ಪ್ರವಾಸಿ ತಾಣವಾಗಿದ್ದ ಈ ಕೆರೆ, ಇಂದು ಒಂದೇ ಕುಟುಂಬದ ಆರು ಮಂದಿಯ ಸಾವಿಗೆ ಸಾಕ್ಷಿಯಾಗಿದೆ. ತಾಯಿ, ಇಬ್ಬರು ಹೆಣ್ಣು ಮಕ್ಕಳು… ಮೂವರು ಮಕ್ಕಳು… ಒಂದೇ ಕುಟುಂಬದ ಆರು ಜೀವಗಳು ನೀರಿನಲ್ಲಿ ಶವವಾಗಿ ಪತ್ತೆಯಾಗಿವೆ. ಆಗಸ್ಟ್ 24ರಂದು ಪತ್ನಿ ಹಾಗೂ ಮಕ್ಕಳು ಕಾಣೆಯಾಗಿದ್ದಾರೆಂದು ಪತಿ ಪೊಲೀಸರಿಗೆ ದೂರು ನೀಡಿದ್ದ. ಆದರೆ, ಎರಡು ದಿನಗಳ ಬಳಿಕ ಪತ್ನಿ ಹಾಗೂ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬ ದೊಳಗಿನ ಜಗಳ… ಕ್ಷಣಿಕ ಕೋಪ… ಕೊನೆಗೆ ಇಡೀ ಕುಟುಂಬವನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆಯಾ? ಅಸಲಿಗೆ ಅಂದು ಮನೆಯಲ್ಲಿ ಏನಾಗಿತ್ತು? ಈ ಕುರಿತು ಇಲ್ಲಿದೆ ಒಂದು ವರದಿ…

ಮೊನ್ನೆ ಶ್ರಾವಣ ಸೋಮವಾರ… ದೇವರ ದರ್ಶನಕ್ಕೆ ಹೋಗಿ ಬಂದ ಬಳಿಕ ಬುತ್ತಿ ಮಾಡಿಕೊಡುವಂತೆ ಪತಿ ಮಲಕಾರಿ ಭೀಮರಾಯ ಜಾಲಗೇರಿ ಪತ್ನಿ ಶೋಭಾಗೆ ಹೇಳಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಜಗಳದ ಬಳಿಕ ಶೋಭಾ ಅವರು ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದಾರೆ. ಆದರೆ… ಮರಳಿ ಮನೆಗೆ ಬಂದಿಲ್ಲ. ಪತ್ನಿ ಹಾಗೂ ಮಕ್ಕಳು ಕಾಣೆಯಾಗುತ್ತಿದ್ದಂತೆ ಆತಂಕಗೊಂಡ ಮಲಕಾರಿ, ಆಗಸ್ಟ್ 24ರಂದು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತ್ನಿ ಮಕ್ಕಳೊಂದಿಗೆ ಎಲ್ಲಿಗೋ ಹೋಗಿದ್ದಾಳೆ… ಪತ್ತೆ ಮಾಡಿಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಆದರೆ ದೂರು ದಾಖಲಾದ ಎರಡು ದಿನಗಳಲ್ಲೇ ಇಡೀ ಪ್ರಕರಣಕ್ಕೆ ಭೀಕರ ತಿರುವು ಸಿಕ್ಕಿದೆ. ವಿಜಯಪುರ ನಗರದ ಹೊರವಲಯದ ಭೂತನಾಳ ಕೆರೆಯ ಅಂಚಿನಲ್ಲಿ ಶವಗಳು ತೇಲಿ ಬಂದಿವೆ. ಮೊದಲಿಗೆ ಒಂದೆರಡು ಶವಗಳು ಪತ್ತೆಯಾದರೆ, ಪರಿಶೀಲನೆ ನಡೆಸಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಮತ್ತಷ್ಟು ಸತ್ಯ ಬಯಲಾಗಿದೆ.
ಬೈಟ್:
ವೈ…ಓ…: ಇನ್ನೂ ಒಂದೇ ಕುಟುಂಬದ ಆರು ಮಂದಿ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ತೊರವಿ ಗ್ರಾಮದ ಶೋಭಾ ಜಾಲಗೇರಿ, 45 ವರ್ಷ, ವಿದ್ಯಾ 16, ಸುವರ್ಣ 14, ಗೌಡೇಶ್ 10, ವಿಕಾಸ 5 ಹಾಗೂ ಸಾನಿಕಾ 7 ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗರಾಜ್, ಆದರ್ಶ ನಗರ ಠಾಣೆಯ ಪಿಎಸ್ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಎಸ್. ಪಿ. ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಆದರೆ ಆರು ಮಂದಿಯ ಸಾವಿನ ಹಿಂದಿನ ನಿಜವಾದ ಕಾರಣವೇನು ಎಂಬುದು ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.
ಒಟ್ನಲ್ಲಿ ಮನೆಯಲ್ಲಿ ನಡೆದ ಕೌಟುಂಬಿಕ ಕಲಹ ಈ ದುರಂತಕ್ಕೆ ಕಾರಣವಾಯಿತೇ? ಅಥವಾ ಇದರ ಹಿಂದೆ ಬೇರೇನಾದರೂ ಕಾರಣ ಇದೆಯೇ? ಪೊಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರ ಬೇಕಿದೆ. ಆದರೆ ಈ ಘಟನೆ ಒಂದು ಕಹಿ ಸತ್ಯವನ್ನು ನೆನಪಿಸುತ್ತದೆ. ಕೌಟುಂಬಿಕ ಕಲಹಗಳು ಬಂದಾಗ ಮಾತಿನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕೋಪದ ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದುಕನ್ನೇ ಬಲಿ ಕೊಡಬಾರದು. ಭೂತನಾಳ ಕೆರೆಯ ಈ ಆರು ಸಾವುಗಳು… ಒಂದು ಕುಟುಂಬವನ್ನು ಕಳೆದುಕೊಂಡ ನೋವಿನ ಜೊತೆಗೆ,
ಸಮಸ್ಯೆ ಬಂದಾಗ ಬದುಕನ್ನು ಆಯ್ಕೆ ಮಾಡಬೇಕು ಎಂಬ ಸಂದೇಶವನ್ನೂ ಬಿಟ್ಟುಹೋಗಿವೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ
