State

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ: ವಿಕಾಸಸೌಧದ ಗೇಟ್​ ಬಳಿ ಭಾರಿ ಹೈಡ್ರಾಮಾ

Share

ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ನಡೆಸುತ್ತಿರುವ ಕಾದಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ ಕಮಲ ಪಡೆ ಹಾಗೂ ಪೊಲೀಸರ ನಡುವೆ ವಿಕಾಸಸೌಧದ ಗೇಟ್ ಬಳಿ ಭಾರಿ ನೂಕಾಟ-ತೂಕಾಟ ನಡೆದು, ಪರಿಸ್ಥಿತಿ ಕೈಮೀರಿದ ಘಟನೆ ವರದಿಯಾಗಿದೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಚುರುಕುಗೊಳಿಸಿದೆ. ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ವಿಕಾಸಸೌಧದ ಮುಖ್ಯ ಗೇಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಗೇಟ್ ಮುಂಭಾಗದಲ್ಲೇ ರಸ್ತೆಯಲ್ಲೇ ಕುಳಿತು ಬೃಹತ್ ಧರಣಿ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಸೌಧದ ಒಳನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡಬೇಕಾಯಿತು. ಘಟನೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯರಾದ ಸಿ. ಟಿ. ರವಿ ಹಾಗೂ ರವಿಕುಮಾರ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ನಾಯಕರನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಸಚಿವರ ರಾಜೀನಾಮೆ ಪಡೆಯುವವರೆಗೂ ಹೋರಾಟ ಸಾಗಲಿದೆ ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.

Tags:

error: Content is protected !!