ವಿಜಯಪುರ ನಗರದಲ್ಲಿ ಆಗಸ್ಟ್ 25ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಯನ್ನು ಶಾಂತಿ, ಸೌಹಾರ್ದ ಹಾಗೂ ಸರ್ವಧರ್ಮೀಯ ಭಾವೈಕ್ಯತೆಯೊಂದಿಗೆ ಆಚರಿಸಲು ಆಯೋಜಕರು ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಾಶಿಂಪೀರ ದರ್ಗಾದ ಜೈನುಲ್ ಆಬಿದಿನ್ ಹಾಶ್ಮಿ, ವಿಜಯಪುರ ನಗರವು ಶತಮಾನಗಳಿಂದ ಸೂಫಿ ಸಂತರು, ಧಾರ್ಮಿಕ ಪರಂಪರೆ ಹಾಗೂ ಸರ್ವಧರ್ಮೀಯ ಸಹಬಾಳ್ವೆಗೆ ಹೆಸರುವಾಸಿ ಯಾಗಿದೆ. ಈದ್ ಮಿಲಾದ್ ಮೆರವಣಿಗೆ ಸೌಹಾರ್ದತೆಯ ಸಂದೇಶ ಸಾರುವಂತಿರಬೇಕು ಎಂದರು. ಮೆರವಣಿಗೆಯಲ್ಲಿ ಸರ್ವಧರ್ಮೀಯರು ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಅವರು ಮನವಿ ಮಾಡಿದರು. ಯುವ ಮುಖಂಡ ಇರ್ಫಾನ್ ಶೇಖ್ ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ಆಯೋಜಕರು ನೀಡುವ ಸೂಚನೆಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ಹಾಗೂ ಸಂಚಾರಕ್ಕೆ ತೊಂದರೆ ಯಾಗದಂತೆ ಮೆರವಣಿಗೆ ನಡೆಸಬೇಕು ಎಂದರು.
ನಗರದ ಶಾಂತಿ-ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಈದ್ ಮಿಲಾದ್ ಆಚರಣೆ ನಡೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಮೀರ್ ಅಹ್ಮದ್ ಬಾಂಗಿ, ಇದ್ರೋಸ್ ಬಕ್ಷಿ, ನಿಜಾಮ್ ಸಿರಿಯಾಳ, ಜಿಯಾ ಪಠಾಣ್, ಸೈಯದ್ ಗುಡಗುಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

