Vijaypura

ಕೊನೆ ಅಂಚಿಗೆ ನೀರು ತಲುಪಿಸದ ಅಧಿಕಾರಿಗಳು; ಕಾಲುವೆಗೆ ಇಳಿದು ರೈತರ ಪ್ರತಿಭಟನೆ

Share

ಮುಳವಾಡ ಏತ ನೀರಾವರಿಗೆ ಸಂಬಂಧಿಸಿದ ಮಲಘಾಣ ಪಶ್ಚಿಮ ಕಾಲುವೆಯ ಕೊನೆ ಅಂಚಿನ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಕಾಲುವೆಗೆ ಇಳಿದು ಪ್ರತಿಭಟನೆ ನಡೆಸಿದರು.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ನಡೆದ ಧರಣಿ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು, ಕೊನೆ ಅಂಚಿನ ಭಾಗಕ್ಕೆ 10ರಿಂದ 15 ದಿನಗಳ ಕಾಲ ನೀರು ಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಕೊನೆ ಅಂಚಿಗೆ ದಿನಕ್ಕೆ ಕೇವಲ ಎರಡು ಗಂಟೆ ಮಾತ್ರ ನೀರು ಹರಿಸಿ, ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾರೆ ಎಂದು ರೈತರು ಆರೋಪಿಸಿದರು.
ಅಧಿಕಾರಿಗಳ ನಡೆಗೆ ಅಸಮಾಧಾನಗೊಂಡ ರೈತರು ಕಾಲುವೆಗೆ ಇಳಿದು ಪ್ರತಿಭಟನೆ ನಡೆಸಿದರು. ಭರವಸೆ ನೀಡಿದಂತೆ ಅಧಿಕಾರಿಗಳು ಕೂಡಲೇ ಕೊನೆ ಅಂಚಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಪ್ರತಿಬಾರಿಯೂ ನೀರಿಗಾಗಿ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಶಿವಾನಂದ ಕಡ್ಲಿಮಟ್ಟಿ ಆಗ್ರಹಿಸಿದರು.
ಕಾಲುವೆ ಭಾಗದಲ್ಲಿರುವ ಸೈಫನ್‌ಗಳನ್ನು ತೆಗೆದು ನೀರು ಬಿಡುವುದಾಗಿ ಅಧಿಕಾರಿಗಳು ಹೇಳಿದ್ದರು. ಅದರಂತೆ ಸೈಫನ್‌ಗಳನ್ನು ಅಗೆದರೂ ಕೊನೆ ಅಂಚಿಗೆ ನೀರು ತಲುಪಿಲ್ಲ ಎಂದು ರೈತ ಮುಖಂಡ ಸುರೇಶ ನಾವಲಗಿ ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಾಗದ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕಾಲುವೆ ವ್ಯಾಪ್ತಿಯ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಚೇತನ್ ಕಿದರಾಪುರ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಭು ಬಸ್ತವಾಡ, ರಾಜಕುಮಾರ ಕಲಬಿಳಗಿ, ಬಸು ತಿಕೋಟಿ, ಮಲಕಾರಿ ತಿಕೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!