Belagavi

ಬೆಳಗಾವಿ: ಸಿಇಐಆರ್ ಪೋರ್ಟಲ್ ಮೂಲಕ 123 ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ ಮಾರ್ಕೆಟ್ ಪೊಲೀಸರು!

Share

ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದುಹೋಗಿದ್ದ ವಿವಿಧ ಕಂಪನಿಗಳ ಒಟ್ಟು 123 ಮೊಬೈಲ್ ಫೋನ್‌ಗಳನ್ನು ‘ಸಿಇಐಆರ್’ (CEIR) ಪೋರ್ಟಲ್ ಬಳಸಿ ಯಶಸ್ವಿಯಾಗಿ ಪತ್ತೆಹಚ್ಚಿರುವ ಪೊಲೀಸರು, ಅವುಗಳನ್ನು ನೈಜ ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್‌ಗಳ ಕುರಿತು ಹಲವಾರು ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಮಾರ್ಕೆಟ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯು, ದಿನಾಂಕ 01/01/2026 ರಿಂದ 22/08/2026ರ ಅವಧಿಯಲ್ಲಿ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಪೋರ್ಟ್ (CEIR) ಪೋರ್ಟಲ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಇದರ ಫಲವಾಗಿ ಒಟ್ಟು 123 ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪೈಕಿ ಈಗಾಗಲೇ ವಿವಿಧ ಕಂಪನಿಗಳ 79 ಮೊಬೈಲ್‌ಗಳನ್ನು ದೂರುದಾರರಿಗೆ ಹಸ್ತಾಂತರಿಸಲಾಗಿತ್ತು. ಉಳಿದುಕೊಂಡಿದ್ದ 44 ಮೊಬೈಲ್‌ಗಳನ್ನು ದಿನಾಂಕ 22/08/2026 ರಂದು ಅಧಿಕೃತವಾಗಿ ಮಾಲೀಕರಿಗೆ ಒಪ್ಪಿಸಲಾಗಿದೆ. ಈ ಸಂಪೂರ್ಣ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಮಾರ್ಕೆಟ್ ಠಾಣೆಯ ಪಿ.ಐ ಜೆ.ಎಂ. ಕಾಲಿಮಿರ್ಚಿ ಹಾಗೂ ಸಿಬ್ಬಂದಿಯಾದ ಯಲ್ಲಪ್ಪ ಕಾಕನೂರ ಮತ್ತು ವಿನಾಯಕ ಯಲಿಗಾರ ಅವರ ಶ್ರಮವನ್ನು ಬೆಳಗಾವಿ ನಗರದ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ವಿಶೇಷವಾಗಿ ಶ್ಲಾಘಿಸಿದ್ದಾರೆ.

Tags:

error: Content is protected !!