Belagavi

ಬೆಳಗಾವಿಯ ಕೆ.ಎಲ್.ಇ ಶಾಲೆಯಲ್ಲಿ ರೋಬೋಟಿಕ್ಸ್ ಶೋ ತಾವೇ ತಯಾರಿಸಿದ ರೋಬೋಟಗಳಿಂದ ರೇಸ್ ನಡೆಸಿ ಮಿಂಚಿದ ವಿದ್ಯಾರ್ಥಿಗಳು!

Share

ಬೆಳಗಾವಿಯ ಕೆ.ಎಲ್.ಇ. ಇಂಟರ್ನ್ಯಾಷನಲ್ ಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಎರಡು ದಿನಗಳ ರೋಬೋಟಿಕ್ಸ್ ಕಾರ್ಯಾಗಾರ ಹಾಗೂ ರೋಬೋಟಿಕ್ ರೇಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಶಾಲೆಯ ವಿದ್ಯಾರ್ಥಿಗಳು ಸ್ವತಃ ರೋಬೋಟ್‌ಗಳನ್ನು ತಯಾರಿಸಿ, ಕಠಿಣ ತಡೆಗೋಡೆಗಳನ್ನು ದಾಟಿಸುವ ಮೂಲಕ ತಮ್ಮ ತಾಂತ್ರಿಕ ಪ್ರೌಢಿಮೆಯನ್ನು ಪ್ರದರ್ಶಿಸಿದ್ದಾರೆ.

ಪ್ರಾಕ್ಟಿಕಲ್ ಶಿಕ್ಷಣದತ್ತ ಕೆ.ಎಲ್.ಇ ಶಾಲೆಯ ಹೆಜ್ಜೆ
ಬೆಳಗಾವಿಯ ಕೆ.ಎಲ್.ಇ. ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಎರಡು ದಿನಗಳ ರೋಬೋಟಿಕ್ಸ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಎನ್‌ಇಪಿ 2020 ರನ್ವಯ ರೋಬೋಟಿಕ್ಸ್ ಶಿಕ್ಷಣವನ್ನು ಮುಖ್ಯವಾಹಿನಿಯ ಬೋಧನೆಯಲ್ಲಿ ಅಳವಡಿಸಿಕೊಳ್ಳಲು ಶಾಲೆ ಇಟ್ಟಿರುವ ಮೊದಲ ಯಶಸ್ವಿ ಹೆಜ್ಜೆ ಇದಾಗಿದೆ. ಶಾಲೆಯ ಪ್ಲಸ್ 2 ಬೋಧಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ರೋಬೋಟ್ ಗಳನ್ನು ಸಿದ್ಧಪಡಿಸಿ ಗಮನಸೆಳೆದಿದ್ದಾರೆ.

11 ತಂಡಗಳು, 60 ವಿದ್ಯಾರ್ಥಿಗಳಿಂದ ರೋಬೋಟಿಕ್ ರೇಸಿಂಗ್ ಜಿದ್ದಾಜಿದ್ದಿ
ಈ ರೋಬೋಟಿಕ್ಸ್ ಪ್ರದರ್ಶನದಲ್ಲಿ ಶಾಲೆಯ ಒಟ್ಟು 11 ತಂಡಗಳ 60 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಿದ್ದರು. ಮೊದಲ ದಿನ ವಿದ್ಯಾರ್ಥಿಗಳು ಸತತ ಶ್ರಮದಿಂದ ತಮ್ಮ ಸ್ವಂತ ಬಾಟ್‌ಗಳನ್ನು ನಿರ್ಮಿಸಿದರೆ, ಎರಡನೇ ದಿನ ಆ ರೋಬೋಟ್‌ಗಳ ಸಾಹಸಿಕ ರೇಸಿಂಗ್ ಸ್ಪರ್ಧೆ ನಡೆಯಿತು. ಪ್ರದರ್ಶನದ ಹಾದಿಯಲ್ಲಿ ಸೃಷ್ಟಿಸಲಾಗಿದ್ದ ನೀರು, ಕೃತಕ ಬೆಂಕಿ, ರಸ್ತೆ ಗುಂಡಿ ಹಾಗೂ ನಾನಾ ರೀತಿಯ ಕಠಿಣ ತಡೆಗೋಡೆಗಳನ್ನು ದಾಟಿಕೊಂಡು ರೋಬೋಟ್‌ಗಳು ಓಡಿದ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ವಾರ್ಷಿಕ ಪ್ರದರ್ಶನವಾಗಿ ರೂಪಿಸಲು ಸನ್ನಾಹ
ಶಾಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ರೋಬೋಟಿಕ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದರ್ಶನವನ್ನು ಮತ್ತಷ್ಟು ಬೃಹತ್ ಮಟ್ಟದಲ್ಲಿ ವಾರ್ಷಿಕ ಸ್ಪರ್ಧೆಯನ್ನಾಗಿ ಆಯೋಜಿಸಲು ಶಾಲಾ ಆಡಳಿತ ಮಂಡಳಿ ಉದ್ದೇಶಿಸಿದೆ. ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳನ್ನು ಬಾಹ್ಯಾಕಾಶ ಮತ್ತು ತಾಂತ್ರಿಕ ರಂಗಕ್ಕೆ ಸಿದ್ಧಪಡಿಸಲು ಈ ಪ್ರದರ್ಶನ ದಾರಿದೀಪವಾಗಿದೆ.

Tags:

error: Content is protected !!