ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ್ ಪಾಟೀಲ ಅವರ ಪರಿಶ್ರಮದ ಫಲವಾಗಿ ಕಿತ್ತೂರು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಒಳಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಸುಮಾರು ₹3 ಕೋಟಿ 25 ಲಕ್ಷ ರೂಪಾಯಿ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ವಿವಿಧ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕ ಬಾಬಾಸಾಹೇಬ್ ಪಾಟೀಲ ಅವರು, ಕಿತ್ತೂರು ಪಟ್ಟಣದ ಹಳೆಯ ಬಸ್ ನಿಲ್ದಾಣದ ಜಾಗ ಒತ್ತುವರಿ ಮಾಡಿಕೊಂಡಿರುವ ಕುರಿತು ಸ್ಪಷ್ಟನೆ ನೀಡಿದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಯಾರೇ ಅತಿಕ್ರಮಣ ಮಾಡಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಬಿಜೆಪಿ ಹೋರಾಟದ ವಿಚಾರವಾಗಿ ಮಾತನಾಡಿದ ಶಾಸಕರು, ಬಿಜೆಪಿಯವರು ಹೋರಾಟ ಮಾಡಲಿ, ಆದರೆ ವಿಧಾನಸೌಧದ ಒಳಗೆ ಪ್ರತಿಭಟನೆ
ನಡೆಸಬಾರದು.
ವಿಧಾನಸಭೆಯಲ್ಲಿ ಸಾಕಷ್ಟು ವಿಷಯಗಳ ಕುರಿತು ಚರ್ಚೆ ನಡೆಸಬೇಕಿದ್ದು, ಎಲ್ಲರಿಗೂ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಕಿತ್ತೂರು ಸಂಸ್ಥಾನವನ್ನು ಆಳಿದ ಅರಸರ ಸಮಾಧಿಗಳು ಅಭಿವೃದ್ಧಿ ಕಾಣದೆ ನಶಿಸುತ್ತಿರುವ ಕುರಿತು ಮಾತನಾಡಿದ ಶಾಸಕರು, ಈ ವಿಚಾರ ತಮ್ಮ ಗಮನಕ್ಕೂ ಬಂದಿದೆ.
ಕಳೆದ ಬಾರಿಯೂ ಪ್ರಾಧಿಕಾರದಲ್ಲಿ ಈ ವಿಷಯ ಚರ್ಚೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಾಧಿಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೇ ಕಿತ್ತೂರು ಉತ್ಸವಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜೈ ಸಿದ್ದರಾಮ ಮಾರಿಹಾಳ ಮಾತನಾಡಿ, ಶಾಸಕರಿಂದ ಕಿತ್ತೂರು ಪಟ್ಟಣಕ್ಕೆ ಸಾಕಷ್ಟು ಅನುದಾನ ದೊರೆತಿದ್ದು, ಪಟ್ಟಣದ 18 ವಾರ್ಡ್‌ಗಳಲ್ಲಿಯೂ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಒಳಚರಂಡಿ ವ್ಯವಸ್ಥೆಯನ್ನು ಮೊದಲ ಆದ್ಯತೆಯಲ್ಲಿ ಸರಿಪಡಿಸಲಾಗುವುದು.
ಮುಂದಿನ ದಿನಗಳಲ್ಲೂ ಕಿತ್ತೂರು ಪಟ್ಟಣದ ಅಭಿವೃದ್ಧಿಗೆ ಶಾಸಕರು ಇನ್ನಷ್ಟು ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
