ಇನ್ನಾದರೂ ಜನಪರ ಹಾಗೂ ರೈತಪರ ಗಂಭೀರ ಚರ್ಚೆಗಳಲ್ಲಿ ಭಾಗವಹಿಸಲಿ…

ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸದನದಲ್ಲಿ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ಮಾಡುವುದನ್ನು ಬಿಟ್ಟು ವಿನಾಕಾರಣ ಸಮಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬರಗಾಲ ಹಾಗೂ ಅತಿವೃಷ್ಟಿಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿವೆ ಎಂದು ಅವರು ಕಿಡಿಕಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ರಾಜೀನಾಮೆ ವಿಚಾರ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಪ್ರಮುಖ ವಿಷಯಗಳ ಬಗ್ಗೆ ಸುಮ್ಮನೆ ವಿರೋಧ ಪಕ್ಷದವರು ಪ್ರತಿಭಟನೆ ಮಾಡಿ ಸದನದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅತಿವೃಷ್ಟಿ, ಬರಗಾಲ ಮತ್ತು ಬೆಳೆ ಹಾನಿಯಂತಹ ಗಂಭೀರ ಸಮಸ್ಯೆಗಳಿದ್ದು, ರೈತರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ಸದನದಲ್ಲಿ ಉತ್ತರ ನೀಡಲು ಸಿದ್ಧವಿದ್ದರೂ ವಿಪಕ್ಷಗಳು ಗದ್ದಲ ಸೃಷ್ಟಿಸುತ್ತಿವೆ ಎಂದರು.
ಮುಂದುವರೆದು ಮಾತನಾಡಿದ ಅವರು, ವಿಪಕ್ಷಗಳು ಕೇವಲ ಆರೋಪ ಮಾಡುವುದನ್ನು ಬಿಟ್ಟು ರೈತರ ಮತ್ತು ಜನರ ಸಂಕಷ್ಟಗಳ ಬಗ್ಗೆ ಧ್ವನಿ ಎತ್ತುವುದರಲ್ಲಿ ಸೋತಿವೆ ಎಂದು ಆಪಾದಿಸಿದರು. ಇನ್ನಾದರೂ ವಿರೋಧ ಪಕ್ಷದವರು ಸಣ್ಣಪುಟ್ಟ ವಿಷಯಗಳನ್ನು ಬದಿಗಿಟ್ಟು ಸದನದಲ್ಲಿ ಜನಪರ ಹಾಗೂ ರೈತಪರ ಗಂಭೀರ ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
