26 ಕರ್ನಾಟಕ ಎನ್‌ಸಿಸಿ ಬೆಟಾಲಿಯನ್‌ನಲ್ಲಿ ಟಿಬಿ ಮುಕ್ತ ಭಾರತ ಪ್ರತಿಜ್ಞಾವಿಧಿ

ಬೆಳಗಾವಿ, ಆಗಸ್ಟ್ 23: ಭಾರತವನ್ನು ಕ್ಷಯರೋಗ (ಟಿಬಿ) ಮುಕ್ತ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿಯಾನ ಅತ್ಯಂತ ಶ್ಲಾಘನೀಯವಾಗಿದೆ ಎಂದು 26 ಕರ್ನಾಟಕ ಎನ್‌ಸಿಸಿ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸುನಿಲ್ ದಾಗರ್ ಹೇಳಿದರು.
ಬೆಳಗಾವಿಯ ಜಾಧವ ನಗರದಲ್ಲಿರುವ 26 ಕರ್ನಾಟಕ ಎನ್‌ಸಿಸಿ ಬೆಟಾಲಿಯನ್‌ನಲ್ಲಿ ನಡೆಯುತ್ತಿರುವ ವಾರ್ಷಿಕ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಎನ್‌ಸಿಸಿ ಕೆಡೆಟ್‌ಗಳಿಗೆ ಟಿಬಿ ಮುಕ್ತ ಭಾರತ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಕ್ಷಯರೋಗ ಕಾಣಿಸಿಕೊಂಡರೆ ಬದುಕುಳಿಯುವುದು ಕಷ್ಟ ಎಂಬ ಆತಂಕವಿತ್ತು. ಆದರೆ ಇಂದು ವೈದ್ಯಕೀಯ ಕ್ಷೇತ್ರ ಮತ್ತು ಆರೋಗ್ಯ ಇಲಾಖೆಯ ನಿರಂತರ ಪ್ರಯತ್ನಗಳಿಂದ ಕ್ಷಯರೋಗವನ್ನು ನಿಯಂತ್ರಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಪ್ರತಿಯೊಬ್ಬರಲ್ಲೂ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಕ್ಷಯರೋಗವು ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಈ ಕುರಿತು ಭಯ ಅಥವಾ ಆತಂಕ ಪಡುವ ಅಗತ್ಯವಿಲ್ಲ. ದೇಹದ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ವಿಶಾಲವಾದ ಭಾರತ ದೇಶವು ಕಾಲಕಾಲಕ್ಕೆ ಅನೇಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಿದ್ದು, ಅವುಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇದೇ ರೀತಿಯ ಜಾಗೃತಿಯ ಭಾವನೆ ಪ್ರತಿಯೊಬ್ಬರಲ್ಲೂ ಮೂಡಿದರೆ ಭಾರತವನ್ನು ಸಂಪೂರ್ಣವಾಗಿ ಟಿಬಿ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಎನ್‌ಸಿಸಿ ಕೆಡೆಟ್‌ಗಳು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸ್ಥಳೀಯ ಆರೋಗ್ಯ ಇಲಾಖೆಗಳೊಂದಿಗೆ ಕೈಜೋಡಿಸಿ ಟಿಬಿ ಮುಕ್ತ ಭಾರತ ಅಭಿಯಾನದ ವಿವಿಧ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಬೇಕು ಎಂದು ಕರ್ನಲ್ ಸುನಿಲ್ ದಾಗರ್ ಕರೆ ನೀಡಿದರು.
ಅಗಸ್ಟ 17 ರಿಂದ ನಡೆದಿರುವ ಈ ವಾರ್ಷಿಕ ಎನ್ ಸಿ ಸಿ ಶಿಬಿರದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಅಥಣಿ ರಾಯಬಾಗ್ ಕಾಗವಾಡ ಬೆಳಗಾವಿ ತಾಲೂಕಿನ 553 ಮತ್ತು 50ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದಾರೆ. ಪ್ರತಿಜ್ಞಾವಿಧಿಯಲ್ಲಿ
ಬಟಾಲಿಯನ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಸಿದ್ದಾರ್ಥ ರೆಡೂ, ಸುಬೇದಾರ್ ಮೇಜರ್ ಕಲ್ಲಪ್ಪ ಪಾಟೀಲ, ಮೇಜರ್ ಮಹೇಶ್ ಗುರನಗೌಡರ, ಲೆಫ್ಟಿನೆಂಟ್ ಸಿದ್ದಪ್ಪ ಚೌಗುಲೆ, ಜೆಸಿಒ ಸುಭಾಷ್ ಭಟ್, ವಿನಾಯಕ ಔಟೆ, ಮುಲು ಸಿಂಗ್ ಹಾಗೂ ಬೆಟಾಲಿಯನ್‌ನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
