ಸ್ವಾತಂತ್ರ್ಯ ದಿನಾಚರಣೆ ಮುಗಿದು ವಾರ ಕಳೆಯುವ ಮುನ್ನವೇ ರಾಷ್ಟ್ರಧ್ವಜಗಳ ರಾಶಿಯನ್ನು ಕಸದ ಬುಟ್ಟಿಗೆ ಎಸೆದಿರುವ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯಪುರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಗರದ ಸೊಲ್ಲಾಪುರ ರಸ್ತೆಯ ಪಾಟೀಲ ಪ್ಲಾನೆಟ್‌ನಲ್ಲಿರುವ ಸ್ಮಾರ್ಟ್ ಬಜಾರ್ ಆವರಣದಲ್ಲಿ ರಾಷ್ಟ್ರಧ್ವಜಗಳ ರಾಶಿಯನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ ಎನ್ನಲಾಗಿದ್ದು, ವಿಡಿಯೋದಲ್ಲಿ ರಾಷ್ಟ್ರಧ್ವಜಗಳು ಕಸದ ನಡುವೆ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ದೇಶದ ಸ್ವಾಭಿಮಾನ, ಏಕತೆ ಹಾಗೂ ದೇಶಭಕ್ತಿಯ ಸಂಕೇತವಾಗಿರುವ ತ್ರಿವರ್ಣ ಧ್ವಜಕ್ಕೆ ಈ ರೀತಿಯ ಅಗೌರವ ತೋರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ದಿನಾಚರಣೆಗಾಗಿ ಬಳಸಿದ ಧ್ವಜಗಳನ್ನು ಕಾರ್ಯಕ್ರಮದ ಬಳಿಕವೂ ಗೌರವಯುತವಾಗಿ ಸಂರಕ್ಷಿಸಿ, ನಿಯಮಾನುಸಾರ ವಿಲೇವಾರಿ ಮಾಡಬೇಕಾದ ಅಗತ್ಯವಿದೆ. ಆದರೆ ರಾಷ್ಟ್ರಧ್ವಜಗಳನ್ನೇ ಕಸದ ಬುಟ್ಟಿಗೆ ಎಸೆದಿರುವ ಆರೋಪ ಕೇಳಿಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಧ್ವಜಗಳನ್ನು ಕಸದ ಬುಟ್ಟಿಗೆ ಎಸೆದವರು ಯಾರು? ಸ್ಮಾರ್ಟ್ ಬಜಾರ್ ಸಿಬ್ಬಂದಿಯೇ ಇದಕ್ಕೆ ಕಾರಣವೇ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.
ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆ ಪರಿಶೀಲಿಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ದೃಢಪಟ್ಟಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ರಾಷ್ಟ್ರಧ್ವಜ ಕೇವಲ ಬಟ್ಟೆಯ ತುಂಡಲ್ಲ; ಅದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ತ್ಯಾಗದ ಪ್ರತೀಕ ಹಾಗೂ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತ. ಹೀಗಾಗಿ ತ್ರಿವರ್ಣ ಧ್ವಜಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿರುವ ಆರೋಪದ ಕುರಿತು ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
