Raibag

ಕುಡಚಿ ಇಂದಿರಾ ಕ್ಯಾಂಟೀನ್‌ನಲ್ಲಿ ರೇಷನ್ ಅಕ್ಕಿ ಬಳಕೆ? ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

Share

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಆಹಾರ ತಯಾರಿಸಲು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮೂಲಕ ವಿತರಿಸುವ ರೇಷನ್ ಅಕ್ಕಿಯನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇನ್ನು ಈ ಇಂದಿರಾ ಕ್ಯಾಂಟೀನ್ ನಡೆಸುವಂತಹ ಆದಿತ್ಯಾ ರಿಸಾರ್ಟ್ ಸಂಸ್ಥೆಯ ಮಯೂರ ಅವರು ಹೇಳುವಂತೆ, ಎರಡು ವೆಟ್ ಗ್ರೈಂಡರ್‌ಗಳನ್ನು ಒದಗಿಸಬೇಕಾದ ಜಾಗದಲ್ಲಿ ಒಂದನ್ನಷ್ಟೇ ಒದಗಿಸಿದ್ದಾರೆ. ಪುರಸಭೆಯಿಂದ ಒದಗಿಸಬೇಕಾದ ಹಲವು ಅಡುಗೆ ಸಾಮಗ್ರಿಗಳು ಹಾಗೂ ಅಗತ್ಯ ಸೌಲಭ್ಯಗಳು ಪೂರ್ಣ ಪ್ರಮಾಣದಲ್ಲಿ ದೊರಕಿಲ್ಲ ಎನ್ನುವುದು ಅವರ ಆರೋಪವಾಗಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಪುರಸಭೆಗೆ ಮನವಿ ಮಾಡಿದರೂ ಸಹ ಸೂಕ್ತ ಸ್ಪಂದನೆ ದೊರಕಿಲ್ಲ ಎಂಬ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

ಸರ್ಕಾರದಿಂದ ಕ್ಯಾಂಟೀನ್ ನಿರ್ವಹಣೆಗೆ ಹೆಚ್ಚಿನ ಮೊತ್ತದಲ್ಲಿ ಖರ್ಚಾಗುತ್ತಿದ್ದರೂ, ಸಾರ್ವಜನಿಕರಿಗೆ ದೊರೆಯಬೇಕಾದ ಗುಣಮಟ್ಟದ ಆಹಾರ ಮತ್ತು ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಯಾಂಟೀನ್ ಆರಂಭದ ದಿನಗಳಲ್ಲಿ ದೊರೆಯುತ್ತಿದ್ದ ಅಲ್ಪೋಪಹಾರ ಹಾಗೂ ಮಧ್ಯಾಹ್ನ ಮತ್ತು ಸಂಜೆ ಊಟದ ಗುಣಮಟ್ಟ ಇದೀಗ ಕಾಣುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಅಂತ ಕಾಯ್ದು ನೋಡಬೇಕಿದೆ.

ಡಿ.ಕೆ.ಉಪ್ಪಾರ ಇನ್‌ ನ್ಯೂಸ್ ಚಿಕ್ಕೋಡಿ

Tags:

error: Content is protected !!