ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರ ಮತ್ತು ವೀಡಿಯೋಗ್ರಾಫರಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಛಾಯಾಗ್ರಹಣ ಕ್ಷೇತ್ರದ ಹಿರಿಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ನಡೆದ ಕ್ಯಾಮೆರಾ ಮತ್ತು ವಸ್ತುಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.

ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರ ಮತ್ತು ವೀಡಿಯೋಗ್ರಾಫರಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ರಾಮನಗರದಲ್ಲಿರುವ ವಿದ್ಯಾರಾಜ ಸಭಾಗೃಹದಲ್ಲಿ 187 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸಂಭ್ರಮದಿಂದ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾರಾಯಣ ಬರಮನಿ ಹಾಗೂ ಗೌರವ ಅತಿಥಿಗಳಾಗಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ (CBRSETI) ನಿರ್ದೇಶಕ ಪ್ರವೀಣ್ ಕೆ.ಎಸ್. ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ್ ರಾಮಣ್ಣವರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕಾರ್ಯದರ್ಶಿ ಪ್ರಕಾಶ್ ಕಳಸದ್, ಖಜಾಂಚಿ ಸುರೇಶ್ ಮುರಕುಂಬಿ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ಛಾಯಾಗ್ರಹಣ ಕ್ಷೇತ್ರದ ಮಹತ್ವ ಮತ್ತು ತಂತ್ರಜ್ಞಾನದ ಕುರಿತು ಬೆಳಕು ಚೆಲ್ಲಿದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ಪ್ರವೀಣ್ ಕೆ.ಎಸ್. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 1839 ರಲ್ಲಿ ಫ್ರಾನ್ಸ್’ನಲ್ಲಿ ಪ್ರಾರಂಭವಾದ ವಿಶ್ವ ಛಾಯಾಗ್ರಹಣ ದಿನವು ಎಲ್ಲಾ ಛಾಯಾಗ್ರಾಹಕರನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಹೊಂದಿದೆ ಎಂದರು. ತಮ್ಮ ಸಂಸ್ಥೆಯಿಂದ ಪ್ರತಿ ವರ್ಷ 70 ಜನರಿಗೆ ಉಚಿತವಾಗಿ 30 ದಿನಗಳ ಛಾಯಾಗ್ರಹಣ ಮತ್ತು ವೀಡಿಯೋಗ್ರಹಣ ತರಬೇತಿಯನ್ನು ನೀಡಲಾಗುತ್ತಿದ್ದು, ವೃತ್ತಿಪರರನ್ನಾಗಿ ರೂಪಿಸಲಾಗುತ್ತಿದೆ. ಪ್ರದರ್ಶನದಲ್ಲಿ ನೀಡಲಾಗಿರುವ ನೂತನ ತಂತ್ರಜ್ಞಾನ ಹಾಗೂ ಉಪಕರಣಗಳ ಮಾಹಿತಿಯನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಇದೇ ವೇಳೆ ಸಾಧಕರಾದ ನಾಮದೇವ ಧನಾಯಿ ಮತ್ತು ನಾರಾಯಣ್ ಗೌಂಡವಾಡಕರ ಅವರನ್ನು ಗಣ್ಯರ ಹಸ್ತದಿಂದ ಸನ್ಮಾನಿಸಲಾಯಿತು. ವಿವಿಧ ಪ್ರಕಾರದ ಕ್ಯಾಮೇರಾಗಳು, ವಿಡ್ಹಿಯೋ, ಫೋಟೋಗ್ರಾಫಿ ವಸ್ತುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. (ಫ್ಲೋ)
ಈ ಸಂದರ್ಭದಲ್ಲಿ ಸುಭಾಷ್ ಓವುಳಕರ, ವಿಜಯಕುಮಾರ ತುಪ್ಪದ, ನಾಮದೇವ ಕೋಳೇಕರ ಇನ್ನುಳಿದವರು ಸಮಾರಂಭದ ಯಶಸ್ವಿಗೆ ಶ್ರಮಿಸಿದರು.
