ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಬೆಳಗಾವಿ ಪೊಲೀಸರು, ಒಂದೇ ದಿನ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮಿಂಚಿನ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಸಿಬಿ ಹಾಗೂ ಸ್ಥಳೀಯ ಠಾಣೆ ಪೊಲೀಸರು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಗಾಂಜಾ, ಮಟಕಾ ಚೀಟಿಗಳು ಹಾಗೂ ಅಕ್ರಮ ಸರಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.


ಬೆಳಗಾವಿ ನಗರದ ರಾಮತೀರ್ಥ ನಗರದ ಕೆಎಸ್ಸಿಎ ಗ್ರೌಂಡ್ ಹತ್ತಿರ ಆಟೋ ರಿಕ್ಷಾದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಕ್ತಾರ ಯೂಸುಫ್ ಶೇಖ್ (42) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ 55,000 ರೂ. ಮೌಲ್ಯದ 1 ಕೆಜಿ 148 ಗ್ರಾಂ ಗಾಂಜಾ ಹಾಗೂ 20,000 ರೂ. ಮೌಲ್ಯದ ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ, ದೇವಗಿರಿ ಗ್ರಾಮದ ಸ್ಮಶಾನದ ಬಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಭರಮಪ್ಪ ವೈಜು ಕುಂಬರಗಿ (28) ಎಂಬಾತನನ್ನು ಕಾಕತಿ ಠಾಣೆ ಪೊಲೀಸರು ದಾಳಿ ನಡೆಸಿ ನಗದು ಹಾಗೂ ಮಟಕಾ ಸಾಹಿತ್ಯದೊಂದಿಗೆ ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಚಂದೂರ ಗ್ರಾಮದ ಹೊಳೆಮ್ಮದೇವಿ ದಾಬಾ ಹತ್ತಿರ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಾಳಪ್ಪ ದ್ಯಾಮಪ್ಪ ನಿಟ್ಟೂರ (42) ಎಂಬಾತನನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿ, 88 ಟೆಟ್ರಾ ಪ್ಯಾಕ್ ವಿಸ್ಕಿಯನ್ನು ಜಪ್ತಿ ಮಾಡಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಮಾಳಮಾರುತಿ, ಕಾಕತಿ ಹಾಗೂ ಮಾರಿಹಾಳ ಪೊಲೀಸ್ ಠಾಣೆಗಳಲ್ಲಿ ವ್ಯಾಪಕ ತನಿಖೆ ಮುಂದುವರಿದಿದ್ದು, ಯಶಸ್ವಿ ದಾಳಿ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

