ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ಮಲಘಾಣ ಪಶ್ಚಿಮ ಕಾಲುವೆಯ ಕೆಳಭಾಗದಲ್ಲಿ ರಂಧ್ರ ಕೊರೆದು(ಸೈಫನ್ ಹೊಡೆದು) ನೀರು ಕಳ್ಳತನ ಮಾಡುತ್ತಿದ್ದ 30 ಪ್ರಕರಣಗಳನ್ನು ಕೆಬಿಜೆಎನ್ಎಲ್ ಅಧಿಕಾರಿಗಳು ಭೇದಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆ ಪ್ರಾರಂಭಿ ಸಿದ್ದಾರೆ. ಮಲಘಾಣ ಪಶ್ಚಿಮ ಕಾಲುವೆ ಒಟ್ಟು 118.60 ಕಿ. ಮೀ. ಉದ್ದವಿದ್ದು, ಈ ಕಾಲುವೆಯ 100 ಕಿ. ಮೀ. ವರೆಗೆ ಮಾತ್ರ ನೀರು ಬರುತ್ತಿತ್ತು. ಆದರೆ, 100 ಕಿ. ಮೀ. ನಿಂದ 118.60 ಕಿ. ಮೀ ಕೊನೆಯ ಹಂತದವರೆಗೆ ನೀರು ತಲುಪುತ್ತಿರಲಿಲ್ಲ. ಇದರಿಂದಾಗಿ ಕಾಲುವೆಯ ಕೊನೆಯ ಭಾಗದ ರೈತರು ಅಳಲು ತೋಡಿ ಕೊಂಡಿದ್ದರು.



ಈ ಹಿನ್ನೆಲೆಯಲ್ಲಿ ಕಾರ್ಯೋನ್ಮು ಖರಾದ ಕೆಬಿಜೆಎನ್ಎಲ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಬಬಲೇಶ್ವರ ತಾಲೂಕಿನ ಯಕ್ಕುಂಡಿ, ಹೊಕ್ಕುಂಡಿ, ಅರ್ಜುಣಗಿ, ಹೆಬ್ಬಳಟ್ಟಿ ವ್ಯಾಪ್ತಿಯಲ್ಲಿ ಸುಮಾರು 30 ಕಡೆಗಳಲ್ಲಿ ಕಾಲುವೆಯ ಬುಡದಲ್ಲಿ ಯಾರ ಕಣ್ಣಿಗೂ ಕಾಣದಂತೆ ರಂದ್ರ ಕೊರೆದು ಸುಮಾರು 4 ರಿಂದ 6 ಇಂಚುಗಳ ಪೈಪುಗಳನ್ನು ಅಳವಡಿಸಿ ಅಕ್ರಮವಾಗಿ ನೀರು ಪಡೆಯುತ್ತಿರುವುದು ಪತ್ತೆಯಾಗಿದೆ. ಈ ಮಧ್ಯೆ ಇತ್ತೀಚೆಗೆ ಕಾಲುವೆಯ ಕೊನೆಯ ಭಾಗವರೆಗೂ ನೀರು ಹರಿಸುವಂತೆ ರೈತರು ಅರ್ಜುಣಗಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೋಂಡ ಕೆಲವು ಜನರು ಇದೇ ಕಾಲುವೆಯಲ್ಲಿ ಸೈಫನ್ ಹೊಡೆದು ನೀರು ಕಳ್ಳತನ ಮಾಡಿರುವುದು ಅಧಿಕಾರಿಗಳ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಅಧಿಕಾರಿಗಳು ಫೆಬ್ರುವರಿಯಲ್ಲಿ ಕಾಲುವೆಗಳ ನಿರ್ವಹಣೆ ಸಂದರ್ಭದಲ್ಲಿ ಇಂಥ ಸೈಫನ್(ರಂಧ್ರ)ಗಳಿಗೆ ಕಾಂಕ್ರಿಟ್ ಹಾಕಿ ಮುಚ್ಚಿದ್ದರು. ಆದರೆ, ಇತ್ತೀಚೆಗೆ ನೀರು ಬಿಡುಗಡೆ ಮಾಡಿದಾಗ ನೀರುಗಳ್ಳರು ಮತ್ತೆ ಆ ಕಾಂಕ್ರಿಟ್ ಅಕ್ರಮವಾಗಿ ನೀರು ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ನೀರು ಕಳ್ಳತನ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಳಾಗುತ್ತಿದೆ ಎಂದು ಕೆಬಿಜೆಎನ್ಎಲ್ ಬಬಲೇಶ್ವರ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜೇಂದ್ರ ವೈ. ರೂಡಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

