ಮುಂಬರುವ ಗಣೇಶೋತ್ಸವಕ್ಕೂ 10 ದಿನಗಳ ಮುಂಚಿತವಾಗಿ ಬೆಳಗಾವಿ ನಗರದ ಎಲ್ಲಾ ರಸ್ತೆಗಳ ದುರಸ್ತಿಯಾಗದಿದ್ದರೆ ಮಹಾನಗರ ಪಾಲಿಕೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮಸೇನೆ ಹಿಂದೂಸ್ಥಾನ ಸಂಸ್ಥಾಪಕ-ಎಂ.ಇ.ಎಸ್. ಮುಖಂಡ ರಮಾಕಾಂತ್ ಕೊಂಡೂಸ್ಕರ್ ರಮಾಕಾಂತ ಕೊಂಡೂಸ್ಕರ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಹಾಳಾಗಿರುವ ರಸ್ತೆಗಳು, ಎಲ್ಆಂಡ್ಟಿ ಕಾಮಗಾರಿಯ ಅಕ್ರಮ ಹಾಗೂ ಇ-ಆಸ್ತಿ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಖಂಡಿಸಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಬೆಳಗಾವಿ ನಗರ ಸೇರಿದಂತೆ ದಕ್ಷಿಣ, ಉತ್ತರ ಹಾಗೂ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳು ತೀವ್ರವಾಗಿ ಹದಗೆಟ್ಟಿದ್ದು, ಸಾರ್ವಜನಿಕರು, ರೈತರು ಮತ್ತು ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ೪ ವರ್ಷಗಳಿಂದ ರಸ್ತೆಗಳ ದುಸ್ಥಿತಿಯಿಂದಾಗಿ ಅಪಘಾತಗಳು ಸಂಭವಿಸಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ, ಸ್ಥಳೀಯ ಆಡಳಿತ ಹಾಗೂ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು. ಉದ್ಯಮಬಾಗ ಫ್ಲೈಓವರ್ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿ 40 ರಿಂದ 60 ಪ್ರತಿಶತ ಕಮಿಷನ್ ಪಡೆದು ಕಳಪೆ ಕಾಮಗಾರಿ ನಡೆಸಲಾಗಿದ್ದು, ಬಿಎಸ್ ಯಡಿಯೂರಪ್ಪ ರಸ್ತೆ, ಯಳ್ಳೂರ ರಸ್ತೆ ಮತ್ತು ವಡಗಾವ-ಅನಗೋಳ ರಸ್ತೆಗಳು ನಿರ್ಮಿಸಿದ ಕೆಲವೇ ತಿಂಗಳುಗಳಲ್ಲಿ ಕೆಸರುಮಯವಾಗಿವೆ. ಸಾರ್ವಜನಿಕರ ಹಣ ಪೋಲು ಮಾಡಿದ ಗುತ್ತಿಗೆದಾರರನ್ನು ತಕ್ಷಣವೇ ಕಪ್ಪು ಪಟ್ಟಿಗೆ ಸೇರಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನಗರದಲ್ಲಿ ಎಲ್ಆಂಡ್ಟಿ (L&T) 24×7 ಕುಡಿಯುವ ನೀರಿನ ಯೋಜನೆಯಡಿ ಪ್ರತಿ ಗಲ್ಲಿಯಲ್ಲೂ ಗುಂಡಿ ತೋಡಿ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಯಾವುದೇ ಕಟಿಂಗ್ ಅಥವಾ ಕನೆಕ್ಷನ್ ಚಾರ್ಜ್ ನೀಡಬೇಕಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದ್ದರೂ, ಹಿಂದೂವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಇದರೊಂದಿಗೆ, ಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ ಪ್ರಮಾಣಪತ್ರ ನೀಡಲು ಕೇವಲ 100-200 ರೂಪಾಯಿ ವೆಚ್ಚವಿದ್ದರೂ ಬಡ ಜನರಿಂದ 25,000 ದಿಂದ 30,000 ರೂಪಾಯಿವರೆಗೆ ದೋಚಲಾಗುತ್ತಿದೆ. ಸಣ್ಣಪುಟ್ಟ ಮನೆ ದುರಸ್ತಿಗೆ ಸಾರ್ವಜನಿಕರನ್ನು ಪ್ರಶ್ನಿಸುವ ಪಾಲಿಕೆ ಅಧಿಕಾರಿಗಳು, ಈ ಬೃಹತ್ ಮಟ್ಟದ ಅಕ್ರಮ ಮತ್ತು ಭ್ರಷ್ಟಾಚಾರದ ವಿರುದ್ಧ ಮೌನ ವಹಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶಾಸ್ತ್ರೀ ನಗರದಲ್ಲಿ ನಾಗರಿಕರು ನಿರಂತರ ಹೋರಾಟ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರವಷ್ಟೇ ರಸ್ತೆ ದುರಸ್ತಿ ಕಾರ್ಯ ಪ್ರಾರಂಭವಾಗಿದ್ದು, ಇದರಲ್ಲಿ ಯಾವುದೇ ರಾಜಕಾರಣಿಗಳ ಫಂಡ್ ಅಥವಾ ಒತ್ತಡವಿಲ್ಲ ಎಂದು ಕೊಂಡೂಸ್ಕರ್ ಸ್ಪಷ್ಟಪಡಿಸಿದರು. ಸ್ಥಳೀಯ ನಗರಸೇವಕರು ಈ ಕೆಲಸದ ಶ್ರೇಯಸ್ಸು ತೆಗೆದುಕೊಳ್ಳಲು ವ್ಯರ್ಥ ಸ್ಟಂಟ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, 200ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ಸಂಚರಿಸುವ ಪ್ರಮುಖ ಮಾರ್ಗಗಳು ಸಂಪೂರ್ಣ ಹಾಳಾಗಿವೆ ಎಂದರು. ಮುಂಬರುವ ಗಣೇಶೋತ್ಸವಕ್ಕೂ 10 ದಿನಗಳ ಮುಂಚಿತವಾಗಿ ನಗರದ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡದಿದ್ದರೆ ಮಹಾನಗರ ಪಾಲಿಕೆಗೆ ಬೃಹತ್ ಮೋರ್ಚಾ ನಡೆಸಿ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
