ಬೆಳಗಾವಿ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಿಡಕಲ್ ಜಲಾಶಯ ಪೂರ್ಣಮಟ್ಟದಲ್ಲಿ ಭರ್ತಿಯಾಗಿದ್ದು, ಜಲಾಶಯದ ಗೇಟ್ಗಳ ಮೇಲಿಂದಲೇ ನೀರು ಹೊರಚೆಲ್ಲುತ್ತಿರುವ ಆತಂಕಕಾರಿ ಹಾಗೂ ರೋಮಾಂಚನಕಾರಿ ದೃಶ್ಯಗಳು ಮುಂಜಾನೆ ಕಂಡುಬಂದಿವೆ. ಯಾವುದೇ ಕ್ಷಣದಲ್ಲಿ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆಯಾಗುವ ಸಾಧ್ಯತೆಯಿದೆ.

ಹಿಡಕಲ್ ಜಲಾಶಯದ ಕಾವಲು ಪಡೆ ಹಾಗೂ ಆಡಳಿತ ಮಂಡಳಿಯು ಯಾವುದೇ ಕ್ಷಣದಲ್ಲಾದರೂ ಕ್ರಸ್ಟ್ ಗೇಟ್ಗಳನ್ನು ತೆರೆದು ಘಟಪ್ರಭಾ ನದಿಗೆ ನೀರನ್ನು ಹರಿಬಿಡಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಿಗ್ಗೆ ಜಲಾಶಯದ ಗೇಟ್ಗಳ ಮೇಲಿಂದ ನೀರು ಧುಮುಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜಲಾಶಯಕ್ಕೆ ಒಳಹರಿವು ಗಣನೀಯವಾಗಿ ಹೆಚ್ಚಿರುವುದರಿಂದ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಘಟಪ್ರಭಾ ನದಿ ತೀರದಲ್ಲಿರುವ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ಹೆಚ್ಚಿನ ಜಾಗ್ರತೆ ವಹಿಸುವಂತೆ ತಾಲೂಕು ಆಡಳಿತ ಹಾಗೂ ಜಲಾಶಯ ಮಂಡಳಿ ಕಟ್ಟುನಿಟ್ಟಿನ ಎಚ್ಚರಿಕೆ ರವಾನಿಸಿದೆ.
