ಶ್ರಾವಣ ಮಾಸ ಹಾಗೂ ನಾಗರ ಪಂಚಮಿ ಹಿನ್ನೆಲೆಯಲ್ಲಿ ವಿಜಯಪುರ ನಗರದ ಶಿವಗಿರಿ ಕ್ಷೇತ್ರದಲ್ಲಿ ಇಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ-ಶ್ರದ್ಧೆಯಿಂದ ಜರುಗಿದವು. ಶ್ರಾವಣ ಸೋಮವಾರದ ಅಂಗವಾಗಿ ರುದ್ರಾಭಿಷೇಕ, ಬುತ್ತಿ ಪೂಜೆ, ಫಲಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ನಾಗರ ಪಂಚಮಿ ಹಿನ್ನೆಲೆಯಲ್ಲಿ ನಾಗದೇವತೆಗೆ ವಿಶೇಷ ಪೂಜೆ ಹಾಗೂ ಹಾಲಿನ ಅಭಿಷೇಕವೂ ನಡೆಯಿತು. ನೂರಾರು ಭಕ್ತರು ಪಾದಯಾತ್ರೆ ಮೂಲಕ ಶಿವಗಿರಿಗೆ ಆಗಮಿಸಿ, ಹರ ಹರ ಮಹಾದೇವ ಎಂಬ ಘೋಷಣೆ ಮೊಳಗಿಸಿದರು. ಈ ಕುರಿತು ಇಲ್ಲಿದೆ ಒಂದು ವರದಿ.


ಇಂದು ಪ್ರಥಮ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಭಕ್ತರ ಪಾಲಿಗೆ ವರವಾಗಿ ಪರಿಣಮಿಸಿರುವ ಶಿವಗಿರಿ ಕ್ಷೇತ್ರ ಇಂದು ಭಕ್ತರಿಂದ ಕಳೆಗಟ್ಟಿತ್ತು. ಶ್ರಾವಣ ಸೋಮವಾರದ ಅಂಗವಾಗಿ ಬೆಳಗ್ಗೆಯಿಂದಲೇ ಶಿವಗಿರಿಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ರುದ್ರಾಭಿಷೇಕ, ಬುತ್ತಿ ಪೂಜೆ, ಫಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಕ್ತರು ಶ್ರದ್ಧೆಯಿಂದ ಪಾಲ್ಗೊಂಡರು.ಪಂಚಾಮೃತ, ಹಾಲು, ನೀರು ಸೇರಿದಂತೆ ವಿವಿಧ ದ್ರವ್ಯಗಳಿಂದ ಶಿವಲಿಂಗಕ್ಕೆ ಅಭಿಷೇಕ ನೆರವೇರಿಸಲಾಯಿತು. ವೇದಮಂತ್ರಗಳ ಪಠಣ, ಶಿವನಾಮ ಸ್ಮರಣೆ ಹಾಗೂ ಪೂಜಾ ಕೈಂಕರ್ಯ ಗಳಿಂದ ಶಿವಗಿರಿ ಆವರಣ ಆಧ್ಯಾತ್ಮಿಕ ವಾತಾವರಣದಿಂದ ತುಂಬಿತ್ತು.
ಇನ್ನು ಮಹಿಳಾ ಭಕ್ತರು ಶಿವಲಿಂಗಕ್ಕೆ ಅನ್ನದ ಅಲಂಕಾರ ಮಾಡಿ, ಹೂವು ಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿದ್ದು ಗಮನ ಸೆಳೆಯಿತು. ನೂರಾರು ಭಕ್ತರು ಪಾದಯಾತ್ರೆ ಮೂಲಕ ಶಿವಗಿರಿಗೆ ಆಗಮಿಸಿ, ‘ಹರ ಹರ ಮಹಾದೇವ’ ಎಂಬ ಘೋಷಣೆ ಮೊಳಗಿಸಿದರು.

ಇನ್ನೂ ನಾಗರ ಪಂಚಮಿ ಹಿನ್ನೆಲೆಯಲ್ಲಿ ಶಿವಗಿರಿಯಲ್ಲಿ ನಾಗದೇವತೆಯ ಆರಾಧನೆಯೂ ವಿಶೇಷವಾಗಿ ನಡೆಯಿತು. ಸುಮಾರು ಹತ್ತು ಅಡಿ ಎತ್ತರದ ಏಳು ಹೆಡೆಯ ನಾಗಮೂರ್ತಿಗೆ ಹಾಲಿನ ಅಭಿಷೇಕ ನೆರವೇರಿಸಿ, ವಿಶೇಷ ಅಲಂಕಾರ ಮಾಡಲಾಯಿತು. ಸುಬ್ರಹ್ಮಣ್ಯ ಕ್ಷೇತ್ರದ ಮಾದರಿಯಲ್ಲಿ ನಾಗದೇವತೆಯ ಆರಾಧನೆ ಹಾಗೂ ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿ ವಿಧಾನಗಳನ್ನು ಇಲ್ಲಿ ನೆರವೇರಿಸಲಾಗುತ್ತಿದೆ. ನಾಗರ ಪಂಚಮಿ ಹಿನ್ನೆಲೆಯಲ್ಲಿ ನಾಗಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮುಂದಿನ ದಿನಗಳಲ್ಲಿ ಶಿವಗಿರಿ ಆವರಣದಲ್ಲಿ ನಾಗಬಣ ಸ್ಥಾಪಿಸುವ ಉದ್ದೇಶ ಹೊಂದಲಾಗಿದ್ದು, ನಾಗಮೂರ್ತಿಗಳನ್ನು ದೇಣಿಗೆಯಾಗಿ ನೀಡಲು ಇಚ್ಛಿಸುವ ಭಕ್ತರು ಮುಂದೆ ಬರಬಹುದು ಎಂದು ಶಿವಗಿರಿ ಆಡಳಿತ ಮಂಡಳಿ ತಿಳಿಸಿದೆ. ಇಂದಿನ ನಾಗರ ಪಂಚಮಿ ಹಾಗೂ ಶ್ರಾವಣ ಸೋಮವಾರದ ವಿಶೇಷ ಪೂಜಾ ಕಾರ್ಯಕ್ರಮಗಳು ಶಿವಗಿರಿಯಲ್ಲಿ ಭಕ್ತಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು. ನಾಗಮೂರ್ತಿಗೆ ಹಾಲಿನ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಶಿವನಿಗೆ ಅನ್ನದ ಅಲಂಕಾರದ ಪೂಜೆಯಲ್ಲಿ ಭಕ್ತರು ಶ್ರದ್ಧೆಯಿಂದ ಪಾಲ್ಗೊಂಡರು. ಪಾದಯಾತ್ರೆ ಮೂಲಕ ಆಗಮಿಸಿದ ನೂರಾರು ಭಕ್ತರು ‘ಹರ ಹರ ಮಹಾದೇವ’ ಎಂಬ ಘೋಷಣೆ ಮೊಳಗಿಸಿ, ಶಿವನ ದರ್ಶನ ಪಡೆದು ಪುನೀತರಾದರು. ಮುಂದಿನ ದಿನಗಳಲ್ಲಿ ಶಿವಗಿರಿ ಆವರಣದಲ್ಲಿ ನಾಗಬಣ ಸ್ಥಾಪಿಸುವ ಯೋಜನೆಯೂ ಭಕ್ತರ ಗಮನ ಸೆಳೆದಿದೆ.
ಒಟ್ನಲ್ಲಿ ಶ್ರಾವಣದ ಭಕ್ತಿ ಹಾಗೂ ನಾಗರ ಪಂಚಮಿಯ ವಿಶೇಷ ಆರಾಧನೆಯೊಂದಿಗೆ ಇಂದು ಶಿವಗಿರಿಯಲ್ಲಿ ಆಧ್ಯಾತ್ಮಿಕ ಸಂಭ್ರಮ ಮನೆಮಾಡಿತ್ತು.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.
