Belagavi

ಬೆಳಗಾವಿಯಲ್ಲಿ ನೃಪತುಂಗ ಪ್ರಶಸ್ತಿ ಪುರಸ್ಕೃತ ಡಾ. ಸರಜೂ ಕಾಟ್ಕರ್ ಅವರಿಗೆ ಭವ್ಯ ಅಭಿನಂದನೆ.

Share

ನೃಪತುಂಗ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಡಾ. ಸರಜೂ ಕಾಟ್ಕರ್ ಅವರಿಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಭವ್ಯ ಅಭಿನಂದನಾ ಸಮಾರಂಭ ನೆರವೇರಿತು. ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಈ ವೇಳೆ ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಎಂ.ಕೆ. ಪಬ್ಲಿಸಿಟಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ರಂಗತಜ್ಞ ಡಾ. ರಾಮಕೃಷ್ಣ ಮರಾಠೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಕುಮಾರಿ ಖುಷಿ ಢವಳಿ ಅವರ ಗ್ರಂಥಪುಷ್ಪ ಗೌರವದೊಂದಿಗೆ ಆರಂಭವಾದ ಸಮಾರಂಭದಲ್ಲಿ ಹಿರಿಯ ಕವಿಗಳಾದ ಎಂ.ಎಸ್. ಇಂಚಲ ಅವರು ಸನ್ಮಾನಿತರಾದ ಡಾ. ಸರಜೂ ಕಾಟ್ಕರ್ ಹಾಗೂ ಶ್ರೀಮತಿ ಸುಮಾ ಕಾಟ್ಕರ್ ದಂಪತಿಯನ್ನು ಗೌರವಿಸಿದರು.

ಮುಖ್ಯ ವಕ್ತಾರರಾಗಿ ಆಗಮಿಸಿದ್ದ ಪ್ರೊ. ಬಿ.ಎಸ್. ಗವಿಮಠ ಮಾತನಾಡಿ, ಬೆಳಗಾವಿ ಜಿಲ್ಲೆಗೆ ತನ್ನದೇ ಆದ ಶ್ರೀಮಂತ ಸಾಹಿತ್ಯಿಕ ಪರಂಪರೆಯಿದೆ ಎಂದರು. ‘ಹಚ್ಚೇವು ಕನ್ನಡದ ದೀಪ’ ಕವನ ರಚಿಸಿದ ಡಾ. ಕರ್ಕಿ ಅವರ ಹಾದಿಯಲ್ಲೇ ಹುಬ್ಬಳ್ಳಿಯಲ್ಲಿ ಜನಿಸಿ ಬೆಳಗಾವಿಯನ್ನು ಕರ್ಮಭೂಮಿಯನ್ನಾಗಿಸಿಕೊಂಡ ಕಾಟ್ಕರ್ ಅವರು ಸಾಹಿತ್ಯ ಸೇವೆ ಸಲ್ಲಿಸುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಸಮಗ್ರ ಜೀವನ ಚರಿತ್ರೆಯನ್ನು ಸಂಶೋಧಿಸಿ ಗ್ರಂಥರೂಪದಲ್ಲಿ ಬರೆದಿರುವ ಅವರು, ಎಂ.ಎ ಪದವಿ ನಂತರ ಪ್ರೊಫೆಸರ್ ಆಗುವ ಅವಕಾಶವಿದ್ದರೂ ಪತ್ರಿಕಾರಂಗವನ್ನು ಆಯ್ಕೆ ಮಾಡಿಕೊಂಡು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಪ್ರೊ. ಎಂ.ಎಸ್. ಇಂಚಲ, ಟಿ.ಎಸ್. ವೆಂಕಣ್ಣಯ್ಯ ಹಾಗೂ ಡಾ. ಎಂ.ಎಂ. ಕಲಬುರ್ಗಿ ಅವರಂಥ ಮಹಾನೀಯರ ಮೇಷ್ಟ್ರು ಪರಂಪರೆಯನ್ನು ನೆನಪಿಸಿದರು.

ಅಭಿನಂದನಾ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಅವರು, 11 ಮಕ್ಕಳಿರುವ ಕುಟುಂಬದಲ್ಲಿ 8ನೇ ಮಗುವಾಗಿ ಜನಿಸಿದ ಸರ್ಜು ಕಾಟ್ಕರ್ ಅವರು, ಮರಾಠಿ ಶಿಕ್ಷಕರ ಮಗನಾಗಿದ್ದರೂ ಕನ್ನಡ ಕಲಿತು ತಮ್ಮ ವಯಸ್ಸಿಗಿಂತಲೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಬಣ್ಣಿಸಿದರು. ಮನೆ ತುಂಬಾ ಸನ್ಮಾನ ಫಲಕಗಳು ಹೆಚ್ಚಾದಾಗ ಅವುಗಳನ್ನು ಮೂರನೇ ಮಹಡಿಯಲ್ಲಿ ಗ್ರಂಥಾಲಯ ಹಾಗೂ ಸಂಗ್ರಹಾಲಯವನ್ನಾಗಿ ಜೋಡಿಸಿಡಲು 1 ಲಕ್ಷ ರೂಪಾಯಿ ನೀಡಿ ಬೆಂಬಲವಾಗಿ ನಿಂತ ಅವರ ಧರ್ಮಪತ್ನಿ ಸುಮಾ ವಹಿನಿಯವರ ಶ್ರಮವನ್ನು ಈ ವೇಳೆ ಜಗಜಂಪಿ ಅವರು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಎಲ್.ಎಸ್. ಶಾಸ್ತ್ರಿ ಅವರು ಅತಿಥಿಗಳಾಗಿ ಆಗಮಿಸಿ ಶುಭನುಡಿಗಳನ್ನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಎಸ್.ಎಂ. ಕುಲಕರ್ಣಿ ವಹಿಸಿದ್ದರು. ರವಿ ಕೊಟಾರಗಸ್ತಿ ಸ್ವಾಗತಿಸಿದರೆ, ಡಾ. ಪಿ.ಜಿ. ಕೆಂಪಣ್ಣವರ ವಂದಿಸಿದರು. ಕಾರ್ಯಕ್ರಮದಲ್ಲಿ ಎಂ.ಕೆ. ಜೈನಾಪುರ, ಬಿ.ಕೆ. ಕುಲಕರ್ಣಿ, ರಾಮಚಂದ್ರ ಕಟ್ಟಿ, ಮಹಾಂತೇಶ ಸೇರಿದಂತೆ ಹಲವು ಗಣ್ಯರನ್ನು ಗೌರವಿಸಲಾಯಿತು.

Tags:

error: Content is protected !!