Vijaypura

ಶಿವಗಿರಿಯಲ್ಲಿ ಶ್ರಾವಣದ ಭಕ್ತಿ; ನಾಗರ ಪಂಚಮಿಗೆ ವಿಶೇಷ ಆರಾಧನೆ

Share

ಶ್ರಾವಣ ಮಾಸ ಎಂದರೆ ಶಿವನ ಆರಾಧನೆಗೆ ಅತ್ಯಂತ ಪವಿತ್ರವಾದ ಮಾಸ. ಈ ಮಾಸದಲ್ಲಿ ಶಿವನಿಗೆ ಅಭಿಷೇಕ, ಪೂಜೆ, ವ್ರತ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಭಕ್ತಿ ಸಮರ್ಪಿಸುವುದು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ. ಅದರಲ್ಲೂ ಶ್ರಾವಣದ ಸೋಮವಾರ ಶಿವನ ಆರಾಧನೆಗೆ ಅತ್ಯಂತ ಶ್ರೇಷ್ಠ ದಿನವೆಂದು ನಂಬಿಕೆ ಇದೆ. ವಿಜಯಪುರ ನಗರದ ಶಿವಗಿರಿಯಲ್ಲೂ ಶ್ರಾವಣ ಮಾಸದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಕುರಿತು ಇಲ್ಲಿದೆ ಒಂದು ವರದಿ.

ಪವಿತ್ರ ಶ್ರಾವಣ ಮಾಸದ ಹಿನ್ನಲೆಯಲ್ಲಿ ವಿಜಯಪುರ ನಗರದ ಕೀರ್ತಿಗೆ ಮುಕುಟ ಪ್ರಾಯವಾಗಿರುವ ಶಿವಗಿರಿ ಕ್ಷೇತ್ರದಲ್ಲಿ ಪ್ರತಿದಿನ ಭಕ್ತಿಯ ವಾತಾವರಣ ಕಳೆಗಟ್ಟಿದ್ದು, ಶ್ರಾವಣ ಸೋಮವಾರದಂದು ರುದ್ರಾಭಿಷೇಕ, ಬುತ್ತಿ ಪೂಜೆ, ಫಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತಿವೆ. ಶಿವನಿಗೆ ಪಂಚಾಮೃತ, ಹಾಲು, ನೀರು ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ಮಾಡುವುದನ್ನು ಭಕ್ತರು ಅತ್ಯಂತ ಶ್ರದ್ಧೆಯಿಂದ ನೆರವೇರಿಸುತ್ತಿದ್ದಾರೆ. ರುದ್ರಾಭಿಷೇಕದ ವೇಳೆ ವೇದಮಂತ್ರಗಳ ಪಠಣ, ಶಿವನಾಮ ಸ್ಮರಣೆ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯುತ್ತಿದ್ದು, ಭಕ್ತರು ಕುಟುಂಬ ಸಮೇತರಾಗಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ಉಪವಾಸ, ಪೂಜೆ, ಅಭಿಷೇಕ ಹಾಗೂ ದಾನ ಧರ್ಮ ಮಾಡುವುದರಿಂದ ಮನಸ್ಸಿಗೆ ಶಾಂತಿ, ಕುಟುಂಬದಲ್ಲಿ ನೆಮ್ಮದಿ ಹಾಗೂ ಒಳಿತಾಗುತ್ತದೆ ಎಂಬುದು ಭಕ್ತರ ನಂಬಿಕೆ.

ಇನ್ನು ನಾಗರ ಪಂಚಮಿ ಹಿನ್ನೆಲೆಯಲ್ಲಿ ಶಿವಗಿರಿಯಲ್ಲಿ ವಿಶೇಷ ಆಕರ್ಷಣೆಯೊಂದು ಭಕ್ತರನ್ನು ಸೆಳೆಯುತ್ತಿದೆ. ಸುಬ್ರಹ್ಮಣ್ಯ ದೇವಸ್ಥಾನದ ಮಾದರಿಯಲ್ಲಿ ಸುಮಾರು ಎಂಟು ಅಡಿ ಎತ್ತರದ ಏಳು ಹೆಡೆಯ ಸುಂದರ ನಾಗನ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
ನಾಗರ ಪಂಚಮಿ ದಿನದಂದು ನಾಗದೇವತೆಗೆ ವಿಶೇಷ ಪೂಜೆ, ಹಾಲಿನ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ಪೂಜಾ ವಿಧಿ ವಿಧಾನಗಳ ಮಾದರಿಯಲ್ಲಿ, ಶಿವಗಿರಿಯಲ್ಲೂ ನಾಗದೋಷ ಪರಿಹಾರಕ್ಕಾಗಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಇದರಿಂದ ನಾಗದೋಷ ಪರಿಹಾರ ಬಯಸುವ ಭಕ್ತರಿಗೆ ವಿಜಯಪುರ ನಗರದಲ್ಲೇ ಧಾರ್ಮಿಕ ಪೂಜೆಗಳನ್ನು ನೆರವೇರಿಸಲು ಅವಕಾಶ ದೊರೆತಂತಾಗಿದೆ. ಶ್ರಾವಣ ಮಾಸದ ಭಕ್ತಿ, ನಾಗರ ಪಂಚಮಿಯ ಧಾರ್ಮಿಕ ಆಚರಣೆ, ಶಿವನ ಆರಾಧನೆ ಹಾಗೂ ನಾಗದೇವತೆಯ ಪೂಜೆಯ ಮೂಲಕ ಶಿವಗಿರಿ ಇದೀಗ ಭಕ್ತಿಯ ತಾಣವಾಗಿ ಕಂಗೊಳಿಸುತ್ತಿದೆ. ನಂಬಿಕೆ ಮತ್ತು ಭಕ್ತಿಯೊಂದಿಗೆ ಇಲ್ಲಿಗೆ ಆಗಮಿಸುವ ಭಕ್ತರು, ರುದ್ರಾಭಿಷೇಕ, ಫಲಾಭಿಷೇಕ, ಬುತ್ತಿ ಪೂಜೆ ಹಾಗೂ ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ವಿವಿಧ ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ

ಒಟ್ಟಿನಲ್ಲಿ, ಭಕ್ತಿಯಿಂದ ಶಿವನನ್ನು ಆರಾಧಿಸಿ, ನಾಗದೇವತೆಯನ್ನು ಪೂಜಿಸಿ, ದೇವರ ಅನುಗ್ರಹವನ್ನು ಪಡೆಯುವ ಭಕ್ತರ ಮನದಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸುತ್ತಿರುವ ಶಿವಗಿರಿ, ಶ್ರಾವಣದ ಈ ಪವಿತ್ರ ದಿನಗಳಲ್ಲಿ ಧರ್ಮ ಮತ್ತು ಭಕ್ತಿಯ ಸಂದೇಶ ಸಾರುತ್ತಿದೆ.

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್
ವಿಜಯಪುರ.

Tags:

error: Content is protected !!