Vijaypura

ಸಚಿವ ಎಂ.ಬಿ.ಪಾಟೀಲ ವಿರುದ್ದ ಮತ್ತೆ ಹರಿಹಾಯ್ದ ಶಾಸಕ ಸಿ ಎಸ್ ನಾಡಗೌಡ

Share

ವಿಜಯಪುರ ಕಾಂಗ್ರೆಸ್‌ನಲ್ಲಿ ಒಳಜಗಳ ಮತ್ತೊಮ್ಮೆ ತೀವ್ರಗೊಂಡಿದೆ. ಸಚಿವ ಎಂ.ಬಿ. ಪಾಟೀಲ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ನಡುವಿನ ವಾಗ್ವಾದ ಇದೀಗ ಬಹಿರಂಗ ಆರೋಪ-ಪ್ರತ್ಯಾರೋಪಕ್ಕೆ ತಿರುಗಿದೆ. ವಿಜಯಪುರ ಕಾಂಗ್ರೆಸ್‌ನಲ್ಲಿ ಮತ್ತೆ ಒಳಜಗಳದ ಕಿಡಿ ಹೊತ್ತಿಕೊಂಡಿದೆ. ಸಚಿವ ಎಂ.ಬಿ. ಪಾಟೀಲ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ಇದೀಗ ಬಹಿರಂಗ ಸಂಘರ್ಷದ ಸ್ವರೂಪ ಪಡೆದುಕೊಂಡಿದೆ. ಸಚಿವ ಸ್ಥಾನ ಸಿಗದಂತೆ ಮಾಡಲು ಎಂ.ಬಿ. ಪಾಟೀಲ ಅವರೇ ಸಂಚು ರೂಪಿಸಿದ್ದಾರೆ ಎಂದು ಶಾಸಕ ಸಿ.ಎಸ್. ನಾಡಗೌಡ ನೇರ ಆರೋಪ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ತಮ್ಮನ್ನು ಸೇರಿದಂತೆ ಕಾಂಗ್ರೆಸ್‌ನ ಇತರ ನಾಯಕರ ರಾಜಕೀಯ ಬೆಳವಣಿಗೆಗೆ ಪಾಟೀಲ ಅಡ್ಡಿಯಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ನಾಡಗೌಡರ ಈ ಆರೋಪದ ಹಿಂದೆ ಜಿಲ್ಲೆಯ ಕಾಂಗ್ರೆಸ್‌ನ ಹಳೆಯ ರಾಜಕೀಯ ಲೆಕ್ಕಾಚಾರವೂ ಇದೆ. 2018ರ ವೇಳೆಯಲ್ಲೇ ನಾಡಗೌಡ ಮತ್ತು ಎಂ.ಬಿ. ಪಾಟೀಲ ಇಬ್ಬರೂ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಜಿಲ್ಲೆಯಲ್ಲಿ ಸಕ್ರಿಯರಾಗಿದ್ದರು.

2010ರಲ್ಲೂ ಇಬ್ಬರೂ ಕಾಂಗ್ರೆಸ್ ಶಾಸಕರಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದ ದಾಖಲೆಗಳಿವೆ. ಆದರೆ ಕಾಲ ಬದಲಾದಂತೆ ಜಿಲ್ಲೆಯ ಕಾಂಗ್ರೆಸ್‌ನೊಳಗಿನ ಬಣ ರಾಜಕಾರಣವೂ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಾಡಗೌಡರು ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. 2025ರಲ್ಲೂ ಅವರು, ಜಿಲ್ಲೆಯಲ್ಲಿ ಹಿರಿಯ ಶಾಸಕನಾಗಿ ಸಚಿವ ಸ್ಥಾನ ಕೇಳುವುದು ತಮ್ಮ ಹಕ್ಕು ಎಂದು ಹೇಳಿದ್ದರು. ಅದೇ ವೇಳೆ, ಯಾರ ಸಚಿವ ಸ್ಥಾನಕ್ಕೂ ತಾವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈಗ ಅದೇ ನಾಡಗೌಡರು ಎಂ.ಬಿ. ಪಾಟೀಲ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಎಂ.ಬಿ. ಪಾಟೀಲರನ್ನು ಶಾಸಕರನ್ನಾಗಿ ಮಾಡಲು, ಸಂಸದರನ್ನಾಗಿ ಮಾಡಲು, ಅವರ ಸಹೋದರ ಸುನೀಲಗೌಡ ಪಾಟೀಲರನ್ನು ಎಂಎಲ್‌ಸಿಯನ್ನಾಗಿ ಮಾಡಲು ತಾವು ಸಹಕಾರ ನೀಡಿದ್ದೆ. ಆದರೆ ಈಗ ಪಕ್ಷದವರನ್ನೇ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ನಾಡಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ… ಪಕ್ಷದ ಸಿದ್ಧಾಂತ ಅವರಿಗೆ ಗೊತ್ತಿಲ್ಲ, ವಿರೋಧಿಗಳಿಗೆ ಸಾಥ್ ನೀಡುತ್ತಾರೆ, ಮಾಡಿದ ಉಪಕಾರವನ್ನೂ ಮರೆತಿದ್ದಾರೆ ಎಂದು ನಾಡಗೌಡ ಟೀಕಿಸಿದ್ದಾರೆ. ಇನ್ನು ವಿಜಯಪುರ ಜಿಲ್ಲೆಯ ರಾಜಕಾರಣದ ಇತಿಹಾಸ ಕೆದಕಿದ ನಾಡಗೌಡ, ದಿವಂಗತ ಬಿ.ಎಂ. ಪಾಟೀಲ ಹಾಗೂ ದೇಶಮುಖ ಕುಟುಂಬ ಮಾತ್ರ ಈ ಜಿಲ್ಲೆಯ ರಾಜಕಾರಣಿಗಳು ಎಂಬಂತೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಒಂದೇ ಪಕ್ಷದಲ್ಲಿ ದಶಕಗಳ ಕಾಲ ರಾಜಕೀಯವಾಗಿ ಸಾಗಿಬಂದ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯ ಇದೀಗ ಬಹಿರಂಗ ಸಮರವಾಗಿ ಮಾರ್ಪಟ್ಟಿದೆ. ನಾಡಗೌಡರ ಆರೋಪಕ್ಕೆ ಸಚಿವ ಎಂ.ಬಿ. ಪಾಟೀಲರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Tags:

error: Content is protected !!