Belagavi

ಅಂಕಲಗಿ ಪೊಲೀಸ್ ಠಾಣೆಯಲ್ಲೇ ಪಿಎಸ್‌ಐ, ಸಿಬ್ಬಂದಿ ಮೇಲೆ ರೌಡಿಶೀಟರ್ ದಂಪತಿ ಹಲ್ಲೆ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ!!

Share

ಬೆಳಗಾವಿ ಜಿಲ್ಲೆಯ ಅಂಕಲಗಿ ಪೊಲೀಸ್ ಠಾಣೆಯ ಆವರಣದಲ್ಲೇ ರೌಡಿಶೀಟರ್ ಒಬ್ಬ ತನ್ನ ಹೆಂಡತಿಯೊಂದಿಗೆ ಸೇರಿ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಪಿಎಸ್‌ಐ ಯಮನಪ್ಪ ಮಾಂಗ ನೀಡಿದ ದೂರಿನನ್ವಯ ರೌಡಿಶೀಟರ್ ಯಲ್ಲಪ್ಪ ಕೊಪ್ಪದ ಹಾಗೂ ಆತನ ಹೆಂಡತಿ ಬಸವ್ವ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಯಮನಪ್ಪ ಮಾಂಗ ರವರು ಸಾರ್ವಜನಿಕರ ದೂರು ಆಲಿಸುತ್ತಿದ್ದಾಗ, ಠಾಣೆಯ ಆವರಣದಲ್ಲಿ ರೌಡಿಶೀಟರ್ ಯಲ್ಲಪ್ಪ ಕೊಪ್ಪದ ಹಾಗೂ ಆತನ ಹೆಂಡತಿ ಬಸವ್ವ ಜೋರಾಗಿ ಗಲಾಟೆ ಮಾಡುತ್ತಿದ್ದರು. ಇದನ್ನು ಗಮಿನಿಸಿ ಹೊರಬಂದ ಪಿಎಸ್‌ಐ, ಸಾರ್ವಜನಿಕರಿಗೆ ಹಾಗೂ ಠಾಣೆಯ ಕರ್ತವ್ಯಕ್ಕೆ ತೊಂದರೆಯಾಗದಂತೆ ಸುಮ್ಮನಿರಲು ಸೂಚಿಸಿದರು. ಇದರಿಂದ ಕೆರಳಿದ ಆರೋಪಿಗಳು, “ನನ್ನ ಮೇಲೆ ರೌಡಿಶೀಟ್ ತೆಗೆದಿದ್ದೀಯಾ” ಎಂದು ಪಿಎಸ್‌ಐ ಅವರ ಮೇಲೆ ಏರಿಬಂದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಸಮವಸ್ತ್ರವನ್ನು ಹಿಡಿದು ಎಳೆದಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ.

ಗಲಾಟೆ ಬಿಡಿಸಲು ಮಧ್ಯಪ್ರವೇಶಿಸಿದ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಶಿಲ್ಪಾ ಶಿಲ್ತಿಬಾಂವಿ ಹಾಗೂ ಇತರ ಸಿಬ್ಬಂದಿಗೂ ಆರೋಪಿಗಳು ಶಾಪಹಾಕಿ ನಿಂದಿಸಿದ್ದಾರೆ. ಈ ವೇಳೆ ಆರೋಪಿ ಯಲ್ಲಪ್ಪ, ಮಹಿಳಾ ಪಿಸಿ ಅವರ ಸಮವಸ್ತ್ರ ಹಿಡಿದು ಎಳೆದಾಡಿ, ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾನೆ. ಸರ್ಕಾರಿ ನೌಕರರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಲಗಮೇಶ್ವರ ನಿವಾಸಿಗಳಾದ ಯಲ್ಲಪ್ಪ ಕೊಪ್ಪದ ಮತ್ತು ಬಸವ್ವ ಕೊಪ್ಪದ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಪ್ರಮುಖ ಕಲಂ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:

error: Content is protected !!