Ballari

ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುದ್ಧೀಕರಣ

Share

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣಗೊಳಿಸಿದ ಘಟನೆಗೆ ಬಳ್ಳಾರಿಯಲ್ಲಿ ಸಚಿವ ಬಿ. ನಾಗೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮ್ಮ ರಾಜೀನಾಮೆಗೆ ಒತ್ತಾಯಿಸಿ ಪಾದಯಾತ್ರೆ ನಡೆಸಲು ಮುಂದಾಗಿರುವ ಬಿಜೆಪಿ ನಾಯಕ ಶ್ರೀರಾಮುಲು ಹಾಗೂ ಬಿಜೆಪಿ ವಿರುದ್ಧ ಸಚಿವರು ಖಡಕ್ ತಿರುಗೇಟು ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ವೇದಿಕೆಯನ್ನು ಶುದ್ಧೀಕರಣಗೊಳಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದ ಸಚಿವ ಬಿ. ನಾಗೇಂದ್ರ, “ಇದು ಅತ್ಯಂತ ಹೇಯ ಹಾಗೂ ಕೋಮುವಾದಿ ಮನಸ್ಥಿತಿಯ ಕೃತ್ಯ,” ಎಂದು ಕಿಡಿಕಾರಿದರು. ಖರ್ಗೆಯವರು ಕಳೆದ ಐವತ್ತು ವರ್ಷಗಳಿಂದ ರಾಜಕೀಯದಲ್ಲಿದ್ದು, ದೇಶದ ಅತ್ಯುನ್ನತ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದಾರೆ. ಒಬ್ಬ ದಲಿತ ನಾಯಕ ಬಂದು ಹೋದ ಜಾಗವನ್ನು ಶುದ್ಧೀಕರಣ ಮಾಡುವುದು ದೇಶದಲ್ಲಿ ಇನ್ನು ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಪಕ್ಷವು ಇದರ ವಿರುದ್ಧ ಉಗ್ರ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.

ತಮ್ಮ ರಾಜೀನಾಮೆಗೆ ಒತ್ತಾಯಿಸಿ ಶ್ರೀರಾಮುಲು ಪಾದಯಾತ್ರೆ ನಡೆಸಲು ಹೊರಟಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಶ್ರೀರಾಮುಲು ಅವರಿಗೆ ಹೊಟ್ಟೆಕಿಚ್ಚು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಎಲ್ಲರಿಗೂ ಹಕ್ಕಿದೆ,” ಎಂದರು. ತಾವು ಕೇವಲ ಆರೋಪಿಯಾಗಿದ್ದು, ಅಪರಾಧಿಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಅವರು, ಬಿಜೆಪಿಯಲ್ಲಿ ಮತ್ತು ಕೇಂದ್ರ ಮಟ್ಟದಲ್ಲಿ ಅನೇಕ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ, ಅವರೆಲ್ಲರೂ ರಾಜೀನಾಮೆ ನೀಡಿದರೆ ತಾವೂ ನೀಡಲು ಸಿದ್ಧವೆಂದು ಸವಾಲೆಸೆದರು. ತಾನೊಬ್ಬ ದಲಿತ ಸಚಿವನಾಗಿರುವುದನ್ನು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರು ಆರೋಪಿಸಿದರು.

Tags:

error: Content is protected !!