State

ಬೆಂಗಳೂರಿನಲ್ಲಿ ರಾಜ್ಯಮಟ್ಟದ 80ನೇ ಸ್ವಾತಂತ್ರ್ಯೋತ್ಸವ; ಸಿಎಂ ಡಿ.ಕೆ.ಶಿವಕುಮಾರ್ ಧ್ವಜಾರೋಹಣ…

Share

ನನ್ನನ್ನು ನಂಬಿ ಇಲ್ಲಿಯವರೆಗೆ ಕರೆತಂದ ನಾಡಿನ ಜನತೆಗೆ ನಾನು “ಸಾಕ್ಷಿಗುಡ್ಡೆ” ಉಳಿಸಿಯೇ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾಣಿಕ್ ಷಾ ಮೈದಾನದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪಣ ತೊಟ್ಟಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ಜೀಪಿನಲ್ಲಿ ಪರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿದರು.

ನಂತರ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರಿಗೆ ನೀಡಿದ ಸಂದೇಶದಲ್ಲಿ “ನನ್ನ ಮಹತ್ವಾಕಾಂಕ್ಷೆಯ ಈ ಅಭಿವೃದ್ಧಿಯ ತೇರನ್ನು ಎಳೆಯಲು ಕೇವಲ ನನ್ನ ಎರಡು ಕೈಗಳು ಸಾಲುವುದಿಲ್ಲ. ಕನ್ನಡಕೋಟಿಯ ಕೈಗಳು ನನ್ನ ಜೊತೆ ಕೈ ಜೋಡಿಸಬೇಕು. ಬನ್ನಿ, ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ. ನನ್ನನ್ನು ನಂಬಿ ಇಲ್ಲಿಯವರೆಗೆ ಕರೆತಂದ ನಾಡಿನ ಜನತೆಗೆ ನಾನು “ಸಾಕ್ಷಿಗುಡ್ಡೆ” ಉಳಿಸಿಯೇ ಹೋಗುತ್ತೇನೆ” ಎಂದು ಪಣ ತೊಟ್ಟಿದ್ದಾರೆ.
ನಾನು ಮುಖ್ಯಮಂತ್ರಿಯಾದ ಎರಡು ತಿಂಗಳಿನಲ್ಲಿ ಜನಸ್ನೇಹಿ ಮತ್ತು ಜನಪರ ಆಡಳಿತ ನೀಡಲು ಹಲವು ಯೋಜನೆಗಳನ್ನು ಆರಂಭಿಸಿದ್ದೇನೆ. ಪಂಚಾಯತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಜನರ ಕುಂದು ಕೊರತೆ ಮತ್ತು ಸಮಸ್ಯೆಗಳನ್ನು ಆಲಿಸಲು ಹೊಸದಾಗಿ ಪ್ರತ್ಯೇಕವಾದ ಪ್ರಜಾಸೇವೆ ಇಲಾಖೆಯನ್ನು ಸ್ಥಾಪಿಸಿದ್ದೇವೆ. ಈ ಇಲಾಖೆಯಿಂದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಮೊದಲ ಮತ್ತು ಮೂರನೇ ಶನಿವಾರ ತಮ್ಮ ಉಸ್ತುವಾರಿ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಸಂಪರ್ಕ ಸಭೆಗಳನ್ನು ನಡೆಸಲಿದ್ದಾರೆ. ನಂತರ ಹೋಬಳಿ ಮತ್ತು ಜಿಲ್ಲಾ ಪಂಚಾಯತ್ ಮಟ್ಟಕ್ಕೂ ಇದು ವಿಸ್ತರಣೆಗೊಳ್ಳಲಿದೆ. ಇದಲ್ಲದೆ ಪ್ರತಿ ಶಾಸಕರೂ ಪಂಚಾಯತ್ ಮಟ್ಟದಲ್ಲೂ ಜನಸಂಪರ್ಕ ಸಭೆಗಳನ್ನು ನಡೆಸಿ ಸಮಸ್ಯೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದ್ದಾರೆ.
ಇದು ನವ ಯುಗ. ಈಗಿನ ಯುವ ಜನತೆಗೆ ಹೊಸ ರೂಪವನ್ನು ಕೊಡಲು ವಿಶ್ವ ಮಟ್ಟದಲ್ಲಿ ಸ್ಪರ್ಧೆಗೆ ಅನುಕೂಲ ಆಗುವಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಅದಕ್ಕಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ 6ನೇ ತರಗತಿಯಿಂದಲೇ AI ಶಿಕ್ಷಣವನ್ನು ಪರಿಚಯಿಸುತ್ತಿದ್ದೇವೆ. ಇದಕ್ಕಾಗಿ ‘AI ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ ಎಂಬ ಮಹತ್ವದ ಕಾರ್ಯಕ್ರಮಗಳನ್ನು ಇದೇ ವೇಳೆ ಘೋಷಿಸಿದರು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರಂತರವಾಗಿ ಬಲಪಡಿಸಿದ್ದೇವೆ. ಇದರಿಂದ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಶೇ.19 ರಷ್ಟು ಇಳಿಕೆಯಾಗಿದೆ. ನೀರಿಗಿಂತ ಅಮೂಲ್ಯವಾದುದು ಮತ್ತೊಂದಿಲ್ಲ. ಆದ್ದರಿಂದ ಜಲ ಭದ್ರತೆ ನಮ್ಮ ಸರ್ಕಾರದ ಮೊದಲ ಆದ್ಯತೆ ಆಗಿದೆ. ಈ ವರ್ಷವೇ 16 ಸಾವಿರ ಕೋಟಿ ರೂಪಾಯಿ ಮೊತ್ತದ 112 ಪ್ರಮುಖ ಜಲಸಂಪನ್ಮೂಲ ಯೋಜನೆಗಳಿಗೆ ಅನುಮೋದನೆ ನೀಡಿದ್ದೇವೆ.

ಹೆಚ್ಚುತ್ತಿರುವ ವಾಹನ ವಿಮಾ ವೆಚ್ಚ ಮತ್ತು ಅಪಘಾತದ ವೇಳೆ ವಿಮೆ ಹಣ ಪಡೆಯುವುದು ಸಾಮಾನ್ಯ ಕುಟುಂಬಗಳಿಗೆ ದೊಡ್ಡ ಸವಾಲಾಗಿದೆ. ವಾಹನ ಮಾಲೀಕರಿಗೆ ಕೈಗೆಟುಕುವ, ಸರಳ ಮತ್ತು ನಂಬಿಕೆಗೆ ಅರ್ಹ ವಿಮಾ ಸೇವೆ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪಿಸಲಾಗುವುದು” ಎಂದು ಇದೇ ವೇಳೆ ಘೋಷಿಸಿದರು.

Tags:

error: Content is protected !!