ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ಮಹಿಳಾ ಸಚಿವ ಸಂಪುಟ ಸೇರ್ಪಡೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮಹಿಳಾ ಸಚಿವ ಸ್ಥಾನಕ್ಕೆ ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಉಮಾಶ್ರೀ ಹಾಗೂ ಗಾಯತ್ರಿ ಅವರ ಹೆಸರುಗಳು ತೀವ್ರ ಚರ್ಚೆಯಲ್ಲಿದ್ದು, ಹೈಕಮಾಂಡ್ ಯಾರನ್ನೇ ಆಯ್ಕೆ ಮಾಡಿದರೂ ಅವರ ಪರವಾಗಿ ಕೆಲಸ ಮಾಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹನದ ಬಳಿಕ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು. ಹೊಸದಾಗಿ ‘ಪ್ರಜಾಸೇವೆ’ ಇಲಾಖೆ ಆರಂಭಿಸಲಾಗುತ್ತಿದೆ. ಈ ಇಲಾಖೆಗೆ ಇನ್ನೂ ಸಚಿವರ ನೇಮಕವಾಗಿಲ್ಲ. ಹಲವು ಖಾತೆಗಳ ಹಂಚಿಕೆಯೂ ಬಾಕಿ ಇದೆ. ಯಾರು ಸಮಯ ನೀಡಲು ಸಾಧ್ಯವಾಗುತ್ತದೆಯೋ ಅವರಿಗೆ ಪ್ರಜಾಸೇವೆ ಇಲಾಖೆ ನೀಡುವ ಸಾಧ್ಯತೆ ಇದೆ ಎಂದರು. ಮಹಿಳಾ ಸಚಿವರ ನೇಮಕವಾಗುವವರೆಗೂ ಮುಖ್ಯಮಂತ್ರಿ ಅವರೇ ಸಂಬಂಧಿಸಿದ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಸಚಿವರ ಆಯ್ಕೆ ವಿಚಾರದಲ್ಲಿ ಕೆಲವು ಗೊಂದಲಗಳಿವೆ. ಆದರೆ ರಾಜ್ಯದಲ್ಲಿರುವ ಎಲ್ಲ ಮಹಿಳಾ ಶಾಸಕರು ಸಮರ್ಥರಾಗಿದ್ದಾರೆ. ಸಚಿವ ಸ್ಥಾನಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಉಮಾಶ್ರೀ ಹಾಗೂ ಗಾಯತ್ರಿ ಅವರ ಹೆಸರುಗಳು ಚರ್ಚೆಯಲ್ಲಿವೆ. ಅಂತಿಮವಾಗಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಪಕ್ಷದ ನಾಯಕತ್ವ ನಿರ್ಧರಿಸಲಿದೆ. ಯಾರಿಗೆ ಸ್ಥಾನ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.ಖಾತೆ ಹಂಚಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಠ ಹಿಡಿದಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಅಧಿವೇಶನ ಮುಗಿದ ಬಳಿಕ ಮಹಿಳೆಯರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎಂದರು.
ಇನ್ನು ಸಚಿವ ಜಮೀರ್ ಅಹಮದ್ ಅವರು ಧ್ವಜಾರೋಹಣಕ್ಕೆ ಹಿಂದೇಟು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಈ ಕುರಿತು ಪತ್ರದಲ್ಲಿ ಮುಖ್ಯವಾಗಿ ಉಲ್ಲೇಖಿಸಲಾಗಿದೆ. ಬಿಬಿಎಂಪಿ ಚುನಾವಣೆ ವಿಚಾರವೂ ಪತ್ರದಲ್ಲಿ ಪ್ರಸ್ತಾಪವಾಗಿದೆ. ಈ ಬಗ್ಗೆ ಜಮೀರ್ ಅಹಮದ್ ಅವರನ್ನೇ ಕೇಳಬೇಕು ಎಂದರು. ಬಿಜೆಪಿಯವರು ಮಾಡುತ್ತಿರುವ ಆರೋಪಗಳಿಗೆ ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರು ತಮ್ಮ ಕಚೇರಿಯಲ್ಲಿಯೇ ಧ್ವಜ ಹಾರಿಸುವುದಿಲ್ಲ. ಹೀಗಿರುವಾಗ ನಮ್ಮ ಮೇಲೆ ಆರೋಪ ಮಾಡಲು ಅವರಿಗೆ ನೈತಿಕತೆ ಇಲ್ಲ ಎಂದು ಟೀಕಿಸಿದರು. ಬಿಬಿಎಂಪಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಕಳೆದ 70 ವರ್ಷಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಅದೇ ರೀತಿ ನಾಳೆ ಯರಗಟ್ಟಿ, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆ ನಡೆಸಲಾಗುವುದು. ಸದ್ಯ ಮೂರು ತಾಲೂಕುಗಳಲ್ಲಿ ಮಾತ್ರ ಸಮಸ್ಯೆ ಇದೆ. ಮೂರು ತಾಲೂಕುಗಳ ಬರ ಪರಿಸ್ಥಿತಿ ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವು ಅಂಗೀಕರಿಸುವ ವಿಚಾರದಲ್ಲಿ ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿರುವ ಕುರಿತು ಮಾತನಾಡಿದ ಅವರು, ಕಳೆದ ಮೂರು ತಿಂಗಳಿಂದ ಪಾಲಿಕೆ ಸಭೆ ನಡೆದಿಲ್ಲ. ಉದ್ದೇಶಪೂರ್ವಕವಾಗಿಯೇ ಸಭೆ ನಡೆಸಲಾಗುತ್ತಿಲ್ಲ ಎಂಬ ಅನುಮಾನವಿದೆ. ಈ ವಿಚಾರದಲ್ಲಿ ಮಾಧ್ಯಮಗಳು ಬೆಳಕು ಚೆಲ್ಲಬೇಕು. ಪಾಲಿಕೆ ಆಡಳಿತಕ್ಕೆ ಈ ಬಗ್ಗೆ ಇಚ್ಛೆ ಇಲ್ಲ. ಉದ್ದೇಶಪೂರ್ವಕವಾಗಿಯೇ ಸಭೆ ನಡೆಸುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದರು.
ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಕೆ.ರಾಮರಾಜನ್ ಇದ್ದರು.
