ಬೆಳಗಾವಿಯ ಕ್ಯಾಂಪ್ ಪ್ರದೇಶದ ರಸ್ತೆಗಳನ್ನು ಬಂದ್ ಮಾಡಲು ಸೇನಾ ಪಡೆಗಳು ಮುಂದಾಗಿರುವುದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪ್ರಸ್ತಾವನೆಯನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ಶಾಸಕ ಆಸೀಫ್ ಸೇಠ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದೀರ್ಘ ಸಭೆ ನಡೆದಿದೆ.

ಬೆಳಗಾವಿಯ ಕ್ಯಾಂಪ್ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಬಂದ್ ಮಾಡುವ ಸಶಸ್ತ್ರ ಪಡೆಗಳ ಪ್ರಸ್ತಾವನೆಗೆ ಸ್ಥಳೀಯ ಶಾಸಕ ಆಸೀಫ್ ಸೇಠ್ ನೇತೃತ್ವದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಮಹತ್ವದ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಕಮಿಷನರ್ ಹಾಗೂ ಕ್ಯಾಂಟೋನ್ಮೆಂಟ್ ಬೋರ್ಡ್ ಸಿಇಒ ಸಿದ್ಧರಾಮ್ ಭಾಗವಹಿಸಿ ಸವಿಸ್ತಾರವಾಗಿ ಚರ್ಚಿಸಿದರು.
ಕ್ಯಾಂಪ್ ರಸ್ತೆಗಳನ್ನು ಮುಚ್ಚುವುದರಿಂದ ನಗರದಲ್ಲಿ ಅಭೂತಪೂರ್ವ ಸಂಚಾರ ದಟ್ಟಣೆ ಉಂಟಾಗಿ, ಪ್ರತಿನಿತ್ಯ ಪ್ರಯಾಣಿಸುವ ಸಾವಿರಾರು ಸಾಮಾನ್ಯ ನಾಗರಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಸಭೆಯಲ್ಲಿ ಶಾಸಕರು ಕಳವಳ ವ್ಯಕ್ತಪಡಿಸಿದರು.
ಸಾರ್ವಜನಿಕರು ಬಳಸುವ ಕ್ಯಾಂಟೋನ್ಮೆಂಟ್ ರಸ್ತೆಗಳನ್ನು ಬಂದ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹಾಗೂ ರಕ್ಷಣಾ ಸಚಿವಾಲಯದ ಸ್ಪಷ್ಟ ನಿರ್ದೇಶನಗಳಿದ್ದರೂ ಈ ರೀತಿಯ ಕ್ರಮ ಕೈಗೊಳ್ಳುತ್ತಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಭೆಯಲ್ಲಿ ಆಕ್ಷೇಪಿಸಲಾಯಿತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಶಾಸಕರ ಹಂತದಿಂದ ಈಗಾಗಲೇ ಅಧಿಕೃತವಾಗಿ ಆಕ್ಷೇಪಣೆ ಸಲ್ಲಿಸಲಾಗಿದೆ. ಸಾರ್ವಜನಿಕರ ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಬ್ರಿಗೇಡಿಯರ್ ಹಾಗೂ ಹಿರಿಯ ಸೇನಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಪ್ರಸ್ತಾವನೆ ಕೈಬಿಡುವ ಭರವಸೆ ಇದೆ ಎಂದು ಶಾಸಕ ಆಸೀಫ್ ಸೇಠ್ ತಿಳಿಸಿದ್ದಾರೆ.
