Belagavi

ಯುವಕರು ಉನ್ನತ ಹುದ್ದೆಗೇರಲು ಪುಸ್ತಕಗಳೇ ಕಾರಣ: ಬೆಳಗಾವಿಯಲ್ಲಿ ಪ್ರೊ. ಸಿ.ಎಂ. ತ್ಯಾಗರಾಜ್

Share

ಯುವಕರು ದೊಡ್ಡ ಹುದ್ದೆಗಳನ್ನು ಅಲಂಕರಿಸಲು ಪುಸ್ತಕಗಳೇ ಮುಖ್ಯ ಕಾರಣ, ಗ್ರಂಥಾಲಯದ ಶಕ್ತಿ ಇಡೀ ಪ್ರಪಂಚದ ಅಭಿವೃದ್ಧಿಯ ಶಕ್ತಿಯಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಈ ಮಹತ್ವದ ಸಂದೇಶ ನೀಡಿದರು.

ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಗಸ್ಟ್ 12ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಕೆ.ಎಲ್.ಇ ಸಂಸ್ಥೆ ಹಾಗೂ ನಗರ ಕೇಂದ್ರ ಗ್ರಂಥಾಲಯದ ಸಂಯುಕ್ತಾಶ್ರಯದಲ್ಲಿ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ-2026’ ಹಾಗೂ ‘ಕರ್ನಾಟಕ ಗ್ರಂಥಾಲಯ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ಗ್ರಂಥಾಲಯಗಳ ಹಾಗೂ ಪುಸ್ತಕಗಳ ಮಹತ್ವದ ಕುರಿತು ವಿಶೇಷವಾಗಿ ಮಾತನಾಡಿದರು. “ನಾಗರೀಕತೆಯನ್ನು ಉಳಿಸಿ ಬೆಳೆಸುವವರಿಗೆ ಸನ್ಮಾನಿಸಿರುವುದು ಸಂತಸ ತಂದಿದೆ. ಗ್ರಂಥಾಲಯದ ಸಿಬ್ಬಂದಿಗಳು ತಮ್ಮ ಜೀವನವನ್ನೇ ವಿದ್ಯಾರ್ಥಿಗಳಿಗಾಗಿ ಅರ್ಪಿಸಿದ್ದಾರೆ. ಗುರುಶಿಷ್ಯ ಪರಂಪರೆ ಗ್ರಂಥದಿಂದ ಬಂದಿದ್ದು, ಗ್ರಂಥದ ಕೊಂಡಿ ಇಲ್ಲದಿದ್ದರೇ ನಾನೊಂದು ತೀರ, ನೀನೊಂದು ತೀರವಿದ್ದಂತೆ” ಎಂದು ವಿವರಿಸಿದರು. “ವಿವಿಧ ವಿಚಾರಗಳ ಆತ್ಮಗಳು ಒಂದೆಡೇ ಸಿಗುವ ಸ್ಥಳವೆಂದರೆ ಗ್ರಂಥಾಲಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವುಗಳನ್ನು ಕಡೆಗಣಿಸುತ್ತಿರುವುದು ನೋವಿನ ಸಂಗತಿ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಲಾ (KALA) ಅಧ್ಯಕ್ಷರಾದ ಡಾ. ಎಸ್.ಎಲ್. ಕಡದೇವರಮಠ ವಹಿಸಿದ್ದರು, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಡಾ. ಶೇಖರ್ ಎಚ್.ಪಿ., ಡಾ. ಭಾರತ್ ಅಲಸಂದಿ, ಡಾ. ಕಿರಣ್ ಮಾಳವದೆ, ಡಾ.ಪಿ.ವೈ. ರಾಜೇಂದ್ರಕುಮಾರ್, ಡಾ. ಪಿ.ವ್ಹಿ. ಕೊಣ್ಣೂರ್, ಸಂತೋಷ್ ಕಾಮಗೌಡ, ರಾಮಯ್ಯ, ಡಾ, ಜ್ಯೋತಿ ಕಾವಳೇಕರ, ಡಾ. ಕಿರಣ್ ಸವಣೂರ, ಕೃಷ್ಣಮೂರ್ತಿ ಎಂ.ವ್ಹಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:

error: Content is protected !!