ಶಾಲಾ-ಕಾಲೇಜುಗಳಲ್ಲಿ ಎನ್ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ರೆಡ್ ಕ್ರಾಸ್ನಂತಹ ಸೇವಾ ಸಂಸ್ಥೆಗಳು ಯುವಜನರಲ್ಲಿ ಸಮಾಜಮುಖಿ ಚಿಂತನೆ ಬೆಳೆಸಲು ಅತ್ಯಗತ್ಯ. ಬೆಳಗಾವಿಯಲ್ಲಿ ನಡೆದ ‘ಅಂತರರಾಷ್ಟ್ರೀಯ ಯುವ ದಿನಾಚರಣೆ’ ಕಾರ್ಯಕ್ರಮದಲ್ಲಿ ಬೋಧಕರು ಹಾಗೂ ಗಣ್ಯರು ಯುವಜನತೆಗೆ ಕರೆ ನೀಡಿದ್ದಾರೆ.


ಬೆಳಗಾವಿಯ ಕಾಕತಿವೇಸ್ನಲ್ಲಿರುವ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ (Govt. CTE) ಭಾರತೀಯ ಕುಟುಂಬ ಯೋಜನೆ ಸಂಘ (FPAI ಬೆಳಗಾವಿ ಶಾಖೆ), ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ‘ಅಂತರರಾಷ್ಟ್ರೀಯ ಯುವ ದಿನಾಚರಣೆ’ ಹಾಗೂ ‘ಜೆನೆವಾ ಕನ್ವೆನ್ಷನ್ ದಿನ-2026’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹಾವಿದ್ಯಾಲಯದ ಪೂರ್ವ ಸೇವಾ ವಿಭಾಗದ ಮುಖ್ಯಸ್ಥರು ಹಾಗೂ ರೀಡರ್ ಆದ ಶ್ರೀ ಪಾರಿ ಬಸವರಾಜ್ ಅವರು ಮಾತನಾಡಿ, “ಶಾಲಾ-ಕಾಲೇಜು ಹಂತಗಳಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್, ಎನ್ಸಿಸಿ ಮತ್ತು ರೆಡ್ಕ್ರಾಸ್ನಂತಹ ಸಂಸ್ಥೆಗಳ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಪ್ರೇರಣೆ ಹಾಗೂ ಸೇವಾ ಮನೋಭಾವ ಬೆಳೆಸಲು ನೆರವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಯುವಜನರು ಮೊಬೈಲ್ ಸ್ಕ್ರೀನ್ ಟೈಮ್ ಹಾಗೂ ನಿರಂತರ ಸ್ಕ್ರೋಲಿಂಗ್ ಕಡಿಮೆ ಮಾಡಿ ಸೃಜನಶೀಲ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಜಂಟಿ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಎನ್. ಎಸ್. ಶ್ರೀಕಾಂತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ FPAI ಬೆಳಗಾವಿ ಶಾಖೆಯ ಉಪಾಧ್ಯಕ್ಷರಾದ ಡಿ. ಬಿ. ಪಾಟೀಲ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಮಾಜ ಸೇವಕ ವಿಕಾಸ್ ಕಲಘಟಗಿ ಭಾಗವಹಿಸಿದ್ದರು. ಇದರೊಂದಿಗೆ ಕಾಲೇಜಿನ ರೀಡರ್ಗಳಾದ ಪುಟ್ಟರಾಜು, ವೀರಯ್ಯ ಸಾಲಿಮಠ ಹಾಗೂ FPAI ಶಖಾ ವ್ಯವಸ್ಥಾಪಕರಾದ ಜಿ. ವಿ. ಕುಲಕರ್ಣಿ ಸೇರಿದಂತೆ ಹಲವು ಗಣ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಪ್ರತಿಯೊಬ್ಬ ನಾಗರಿಕನು ನೀಡುವ ತೆರಿಗೆಯೇ ದೇಶದ ಪ್ರಗತಿಗೆ ಮೂಲಸ್ತಂಭವಾಗಿದ್ದು, ವೈಯಕ್ತಿಕ ಅಭಿವೃದ್ಧಿಯ ಜೊತೆಗೆ ದೇಶದ ವಿಕಾಸಕ್ಕೂ ಯುವಜನರು ಕೈಜೋಡಿಸಬೇಕು ಎಂದು ವೇದಿಕೆಯಲ್ಲಿದ್ದ ಗಣ್ಯರು ಕರೆ ನೀಡಿದರು.
