ಬೆಳಗಾವಿಯ ವಡಗಾವನ ಪ್ರಸಿದ್ಧ ಶ್ರೀ ಮಂಗಾಯಿ ದೇವಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಆಗಸ್ಟ್ 11ರಿಂದ ಆರಂಭವಾಗಲಿರುವ ಈ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಸಂಚಾರ ಕಿರಿಕಿರಿ ಉಂಟಾಗದಂತೆ ಪೊಲೀಸ್ ಇಲಾಖೆ ಹಾಗೂ ದೇವಾಲಯ ಕಮಿಟಿ ವತಿಯಿಂದ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ವಡಗಾವನ ಪ್ರಸಿದ್ಧ ಶ್ರೀ ಮಂಗಾಯಿ ದೇವಿ ಜಾತ್ರೆಯನ್ನು ಶಿಸ್ತುಬದ್ಧ ಹಾಗೂ ಶಾಂತಿಯುತವಾಗಿ ನಡೆಸಲು ಕಮಿಟಿ ಪದಾಧಿಕಾರಿಗಳು ಅಗತ್ಯ ತಯಾರಿ ನಡೆಸಿದ್ದು, ಆಗಮಿಸುವ ಭಕ್ತರು, ವ್ಯಾಪಾರಿಗಳು ಮತ್ತು ಸೇಲ್ಸ್‌ಮನ್‌ಗಳು ಶಿಸ್ತು ಪಾಲಿಸುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕ ಸಾರಿಗೆಗೆ ಅನುಕೂಲವಾಗುವಂತೆ ಯೆಳೂರು ಬಸ್ ಸ್ಟಾಪ್‌ವರೆಗೆ ಸಿಟಿ ಬಸ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಪಾಟೀಲ ಗಲ್ಲಿ, ವಿಷ್ಣು ಗಲ್ಲಿ ಹಾಗೂ ಕಾರಬಾರ ಗಲ್ಲಿಯ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಭಕ್ತಾದಿಗಳು ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ರಸ್ತೆಯಲ್ಲಿ ತಂದು ದಟ್ಟಣೆ ಉಂಟುಮಾಡದೆ ನಿಗದಿತ ಸ್ಥಳಗಳಲ್ಲೇ ನಿಲ್ಲಿಸಿ ಸಹಕರಿಸಬೇಕಾಗಿ ದೇವಾಲಯ ಟ್ರಸ್ಟಿ ಪಾಟೀಲ್ ಹಾಗೂ ಕಮಿಟಿಯ ಪ್ರಮುಖರು ಕೋರಿದ್ದಾರೆ.

ಇನ್ನು ಸಂಚಾರ ವ್ಯವಸ್ಥೆ ಕುರಿತು ಮಾಹಿತಿ ನೀಡಿರುವ ಸಂಚಾರ ಪೊಲೀಸ್ ಅಧಿಕಾರಿ ಶಿವಾಜೀರಾವ್ ನಿಕಮ್, ರಸ್ತೆಯ ಒಂದು ಬದಿಯಲ್ಲಿ ಮಾತ್ರ ಅಂಗಡಿ ಮುಂಗಟ್ಟುಗಳನ್ನು ಹಾಕಿಕೊಳ್ಳಲು ಸೂಚಿಸಲಾಗಿದೆ ಎಂದಿದ್ದಾರೆ. ಪಾಟೀಲ ಗಲ್ಲಿ ತಾಲಿಂಖಾನಾ, ವಿಷ್ಣು ಗಲ್ಲಿ ಕೊನೆಯ ಬಸ್ ಸ್ಟಾಪ್ ಸೇರಿದಂತೆ ಹಲವೆಡೆ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಹಳೆಯ ಹಾಗೂ ಹೊಸ ಪಿಎಚ್‌ಸಿ ಆವರಣದಲ್ಲಿ ವಾಹನಗಳ ಪಾರ್ಕಿಂಗ್ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ಕಾರಣಕ್ಕೂ ಗುಡಿಯವರೆಗೆ ವಾಹನಗಳನ್ನು ತರಬಾರದು ಎಂದು ಬೆಳಗಾವಿ ಪೊಲೀಸರ ಪರವಾಗಿ ಮನವಿ ಮಾಡಿದ್ದಾರೆ.
