ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅನುದಾನ ಹಾಗೂ ಸಚಿವ ಸ್ಥಾನ ವಂಚಿತ ಅಸಮಾಧಾನಿತ ಶಾಸಕರನ್ನು ಒಗ್ಗೂಡಿಸಿ ಸಭೆ ನಡೆಸಲು ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಮುಂದಾಗಿದ್ದಾರೆ. ನಾವು ಏನೇ ಆದರೂ ಪಾರ್ಟಿ ಬಿಟ್ಟು ಹೋಗಲ್ಲ ಅನ್ನುವುದೇ ನಮಗೆ ದೊಡ್ಡ ತಪ್ಪಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶೋಕ್ ಪಟ್ಟಣ, “ರಾಜೀನಾಮೆ ನೀಡುತ್ತೇವೆ ಎಂದು ಬೆದರಿಕೆ ಹಾಕುವವರ ಮನೆಗೆ ಹೋಗಿ ಸಮಾಧಾನ ಪಡಿಸುತ್ತಾರೆ. ಆದರೆ ಏನೇ ಮಾಡಿದರೂ ಕಾಂಗ್ರೆಸ್ನಲ್ಲೇ ಇರುತ್ತಾರೆ ಎಂದು ನಮ್ಮನ್ನು ನಿರ್ಲಕ್ಷಿಸಲಾಗಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಂಬರುವ 13ರಂದು ಶಾಸನಸಭೆ ಅಧಿವೇಶನ ಪ್ರಾರಂಭವಾಗುತ್ತಿದ್ದು, ಈ ವೇಳೆ 20ರಿಂದ 25 ಅಸಮಾಧಾನಿತ ಶಾಸಕರು ಒಂದು ಕಡೆ ಸೇರಿ ಸಭೆ ನಡೆಸಲಿದ್ದೇವೆ. ಹೈಕಮಾಂಡ್ ಹಾಗೂ ರಾಜ್ಯದ ವರಿಷ್ಠರಿಂದ ಹೆಚ್ಚಿನ ಅನುದಾನ ಪಡೆದುಕೊಳ್ಳುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗುತ್ತಿದೆ ಎಂದು ತಿಳಿಸುವ ಮೂಲಕ ಆಡಳಿತಾರೂಢ ಸರ್ಕಾರಕ್ಕೆ ಹೊಸ ಬಾಂಬ್ ಸಿಡಿಸಿದ್ದಾರೆ.
