ವೃತ್ತಿ ರಂಗಭೂಮಿಯ ಪ್ರಭಾವ ಕಡಿಮೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ರಂಗಸಂಗೀತದ ಶ್ರೇಷ್ಠ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅತ್ಯಂತ ಅಗತ್ಯವಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅವರು ತಿಳಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ವೃತ್ತಿ ರಂಗಭೂಮಿ ಸಹಯೋಗದಲ್ಲಿ ಬೆಳಗಾವಿಯಲ್ಲಿ ಕಳೆದ ೧೫ ದಿನಗಳಿಂದ ಅಭಿನಯ ಸಹಿತ ರಂಗಸಂಗೀತ ಮಹಿಳಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಇಂದು ಕನ್ನಡ ಭವನದಲ್ಲಿ ಜರುಗಿತು.
ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ, ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಖ್ಯಾತ ಸಂಗೀತ ನಿರ್ದೇಶಕ ರಾಜಪ್ರಭು ದೋತ್ರೆ, ನಾಟಕಕಾರ ಶಿರೀಷ ಜೋಶಿ, ರಂಗಚಿಂತಕರಾದ ಡಾ. ಡಿ.ಎಸ್. ಚೌಗಲೆ, ಡಾ. ರಾಮಕೃಷ್ಣ ಮರಾಠೆ, ಎನ್. ನಟರಾಜ್ ಸೇರಿದಂತೆ ಇತರೆ ರಂಗಾಸಕ್ತ ಗಣ್ಯರು ಉಪಸ್ಥಿತರಿದ್ದರು.
ಸಮಾರೋಪ ಮಾತಗಳನ್ನಾಡಿದ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ, ವೃತ್ತಿ ರಂಗಭೂಮಿ ಪ್ರಭಾವ ಇಂದು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ರಂಗಾಯಣ ಅಭಿನಯ ಸಹಿತ ರಂಗ ಸಂಗೀತ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಈ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಹೋಗುವುದು ಇಂದು ತುಂಬಾ ಅಗತ್ಯವಿದೆ. ತರಬೇತಿ ಪಡೆದ ಮಹಿಳೆಯರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಅಭಿನಯಿಸಿ ಹಾಡುವುದರ ಜೊತೆಗೆ ಶಾಲಾ ಕಾಲೇಜು ಮಕ್ಕಳಲ್ಲಿ ಆಸಕ್ತ ಮೂಡಿಸುವ ಪ್ರಯತ್ನ ಮುಂದುವರೆಸುವುದು ಸೂಕ್ತ ಎಂದು ತಿಳಿಸಿದರು.
ರಂಗಾಯನ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, “ವೃತ್ತಿರಂಗಭೂಮಿಯ ಕಂಪನಿ ನಾಟಕಗಳಿಗೆ ೧೫೦ ವರ್ಷಗಳಿಗಿಂತ ಹೆಚ್ಚು ಚಾರಿತ್ರಿಕ ಇತಿಹಾಸವಿದೆ. ತನ್ನ ಕಲೆಯ ವೈಭವದ ಜೊತೆಗೆ ರಂಗ ಸಂಗೀತದ ರಂಗಗೀತೆಗಳ ದೊಡ್ಡಪರಂಪರೆಯಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ತರಬೇತಿ ಪಡೆದ ಕಲಾವಿದರು ಕಂಪನಿ ನಾಟಕಗಳ ಸೊಗಡನ್ನು ನೆನಪಿಸುವ ಕಂದಪದ್ಯಗಳು, ರಂಗಗೀತೆಗಳು ಹಾಗೂ ಅಭಿನಯ ಸಮೇತ ರಂಗಸಂಗೀತ ಪ್ರದರ್ಶನ ವಿಶೇಷ ಗಮನ ಸೆಳೆಯಿತು.
