ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನರ ಆಶಯಕ್ಕೆ ಅನುಗುಣವಾಗಿ ಕಾಂಗ್ರೆಸ್ ವರಿಷ್ಠರು ಹಾಗೂ ಪಕ್ಷದ ನಾಯಕರು ನನಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಸಚಿವರಾಗಿ ಶನಿವಾರ ಅಥಣಿ ಪಟ್ಟಣಕ್ಕೆ ಆಗಮಿಸಿದ ಲಕ್ಷ್ಮಣ್ ಸವದಿ ಅವರಿಗೆ ಅಭಿಮಾನಿಗಳು ಕಾರ್ಯಕರ್ತರು ಮತ್ತು ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.


ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ ಅವರು ಸಚಿವ ಸ್ಥಾನ ದೊರೆತಿರುವುದಕ್ಕೆ ನನಗೇನೂ ಅಚ್ಚರಿಯಿಲ್ಲ. ಜನರು ಹಾಗೂ ಬೆಂಬಲಿಗರ ಬಯಕೆಯಂತೆ ಪಕ್ಷದ ನಾಯಕರು ಈ ಜವಾಬ್ದಾರಿ ನೀಡಿದ್ದಾರೆ ಎಂದರು.
ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿವೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ತಮಗೆ ಸಚಿವ ಸ್ಥಾನ ನೀಡುವುದನ್ನು ಯಾರೂ ವಿರೋಧಿಸಿಲ್ಲ. ಶಾಸಕರು ತಮಗೆ ಸಚಿವ ಸ್ಥಾನ ಬೇಕು ಎಂದು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ಯಾರಾದರೂ ದೂರು ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಸವದಿ ಸ್ಪಷ್ಟಪಡಿಸಿದರು.
ಯಾವ ಖಾತೆ ನೀಡಿದರೂ ಅದನ್ನು ಪಾರದರ್ಶಕವಾಗಿ ಹಾಗೂ ಜನಪರವಾಗಿ ನಿರ್ವಹಿಸಲು ಸಿದ್ಧನಿದ್ದೇನೆ. ಸೋಮವಾರದ ವೇಳೆಗೆ ತಮಗೆ ಯಾವ ಖಾತೆ ನೀಡಲಾಗುತ್ತದೆ ಎಂಬುದು ಸ್ಪಷ್ಟವಾಗಲಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲವೂ ಸರಿಯಾಗಿದ್ದು, ಮುಂಬರುವ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಬೆಳಗಾವಿ ಜಿಲ್ಲೆಯ ಎಲ್ಲ 14 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿ ಹೊಂದಲಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
