ಬೆಳಗಾವಿಯ ಕಂಗ್ರಾಳಿ ಖೂರ್ದ್ ಜ್ಯೋತಿ ನಗರದ ಮುಖ್ಯ ರಸ್ತೆಯಲ್ಲಿ ಕಸದ ರಾಶಿ ಬಿದ್ದು ತೀವ್ರ ದುರ್ನಾತ ಹರಡಿದ್ದು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಓಡಾಡಲು ಹೈರಾಣಾಗಿದ್ದಾರೆ. ತೆರಿಗೆ ಪಾವತಿಸಿದರೂ ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಒಂದು ವರದಿ.


ಬೆಳಗಾವಿ ನಗರದ ಕಂಗ್ರಾಳಿ ಖೂರ್ದನ ಜ್ಯೋತಿ ನಗರ ಮುಖ್ಯ ರಸ್ತೆ ಹಾಗೂ ಎಪಿಎಂಸಿ ಮಾರುಕಟ್ಟೆಯ ಕಾಂಪೌಂಡ್ ಗೋಡೆಗೆ ಹೊಂದಿಕೊಂಡಂತೆ ಬೃಹತ್ ಪ್ರಮಾಣದ ಕಸದ ರಾಶಿ ಬಿದ್ದಿದೆ. ಪರಿಣಾಮ ಇಡೀ ಪ್ರದೇಶದಲ್ಲಿ ತೀವ್ರ ದುರ್ನಾತ ಹರಡಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ಮಹಾನಗರ ಪಾಲಿಕೆಗೆ ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದರೂ, ಮೂಲಭೂತ ನೈರ್ಮಲ್ಯ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿಯಿಂದಾಗಿ ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿ ಹೆಚ್ಚಾಗಿದೆ. ಇದರೊಂದಿಗೆ ರಸ್ತೆಯಲ್ಲಿ ಬೀದಿ ದೀಪಗಳು ಸರಿಯಾಗಿ ಬೆಳಗದೆ ಇರುವುದರಿಂದ ಸಂಜೆ 7 ಗಂಟೆಯ ನಂತರ ಮಹಿಳೆಯರು, ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳು ಹೊರಬರಲು ಭಯಪಡುವಂತಾಗಿದೆ. ರಾತ್ರಿ ವೇಳೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದು ಸಾರ್ವಜನಿಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಅಪಘಾತ ಮತ್ತು ನಾಯಿಗಳ ದಾಳಿಯ ಭೀತಿ ಎದುರಾಗಿದೆ.
ಮಹಾನಗರ ಪಾಲಿಕೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಾಮಕೇ ವಾಸ್ತೆ ಭೇಟಿ ನೀಡಿ ಪರಿಶೀಲನೆ ಮಾಡಿ ಹೋಗುತ್ತಿದ್ದಾರೆಯೇ ಹೊರತು, ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಅರುಣ್ ಕಾಲಕುಂದ್ರಿಕರ್ ಆರೋಪಿಸಿದ್ದಾರೆ. ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕಸ ತೆರವುಗೊಳಿಸಿ, ಬೀದಿ ದೀಪ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಕೈಮುಗಿದು ಮನವಿ ಮಾಡಿದ್ದಾರೆ.
