ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣದ ಸಂಯುಕ್ತಾಶ್ರಯದಲ್ಲಿ ‘ಅಭಿನಯ ಸಮೇತ ರಂಗಸಂಗೀತ ಮಹಿಳಾ ತರಬೇತಿ ಕಾರ್ಯಾಗಾರ (ವನಿತೆಯರ ವಿಶೇಷ ರಂಗಪ್ರಯೋಗ)’ದ ಸಮಾರೋಪ ಸಮಾರಂಭ ಮತ್ತು ರಂಗ ಪ್ರದರ್ಶನವು ಆಗಸ್ಟ್ 8 ರಂದು ನಡೆಯಲಿದೆ ಎಂದುದಾವಣಗೆರೆ ವೃತ್ತಿರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರು ತಿಳಿಸಿದರು.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಬೆಳಗಾವಿಯ ಕನ್ನಡ ಭವನದಲ್ಲಿ ದಿನಾಂಕ 08-08-2026ರ ಶನಿವಾರ ಸಂಜೆ 6:00 ಗಂಟೆಗೆ ಕಾರ್ಯಾಗಾರದ ಸಮಾರೋಪ ಸಮಾರಂಭ ಹಾಗೂ ರಂಗ ಪ್ರದರ್ಶನ ನಡೆಯಲಿದೆ. ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ರಂಗ ಪ್ರದರ್ಶನಕ್ಕೆ ಉದ್ಘಾಟನೆ ನೆರವೇರಿಸಲಿದ್ದಾರೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ. ಎಮ್. ಜಾನಕಿ ಅವರು ಸಮಾರೋಪ ಭಾಷಣ ಮಾಡಲಿದ್ದು, ದಾವಣಗೆರೆ ವೃತ್ತಿರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಹೆಚ್. ಚನ್ನೂರ, ನೃಪತುಂಗ ಪ್ರಶಸ್ತಿ ಪುರಸ್ಕೃತ ಸರಜೂ ಕಾಟಕರ, ರಂಗಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ, ಕನ್ನಡ ಭವನದ ಕಾರ್ಯದರ್ಶಿ ವೈ.ರು. ಪಾಟೀಲ, ಹಿರಿಯ ಸಾಹಿತಿ ಪ್ರೊ. ಬಸವರಾಜ ಜಗಜಂಪಿ, ನಾಟಕಕಾರ ಡಾ. ಡಿ. ಎಸ್. ಚೌಗಲೆ, ರಂಗಚಿಂತಕ ಡಾ. ರಾಮಕೃಷ್ಣ ಮರಾಠೆ, ರಂಗ ನಿರ್ದೇಶಕ ಪಂ. ರಾಜಪ್ರಭು ಧೋತ್ರೆ ಹಾಗೂ ನಾಟಕಕಾರ ಶಿರೀಷ ಜೋಶಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಹಾಗೂ ತರಬೇತಿ ಕಾರ್ಯಾಗಾರದ ಸಂಚಾಲಕ ಎನ್. ನಟರಾಜ್ ಸಂಘಟನೆಯಲ್ಲಿದ್ದು, ಕನ್ನಡ ಭವನ ಬೆಳಗಾವಿಯ ಸಹಕಾರದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
