ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಬೆಳಗಾವಿಯ ಅಭಿವೃದ್ಧಿ ಹಾಗೂ ಯುವಕರ ಉದ್ಯೋಗ ಸೃಷ್ಟಿ ಕುರಿತು ಪ್ರಮುಖ ಚರ್ಚೆ ನಡೆಸಿದರು. ಬೆಳಗಾವಿಯಲ್ಲಿರುವ ರಕ್ಷಣಾ ಇಲಾಖೆಯ ಭೂಮಿಯನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಅಥವಾ ಅಲ್ಲಿ ಪ್ರಮುಖ ಕೈಗಾರಿಕಾ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಐಟಿ ಮತ್ತು ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸಲು ರಕ್ಷಣಾ ಇಲಾಖೆಯ ವಶದಲ್ಲಿರುವ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಬೇಕೆಂದು ಶಾಸಕ ಅಭಯ್ ಪಾಟೀಲ್ ರಕ್ಷಣಾ ಸಚಿವರಿಗೆ ವಿನಂತಿಸಿದರು. ಒಂದು ವೇಳೆ ಭೂಮಿ ಹಸ್ತಾಂತರ ಸಾಧ್ಯವಾಗದಿದ್ದರೆ, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅದೇ ಭೂಮಿಯಲ್ಲಿ ಕೇಂದ್ರ ಸರ್ಕಾರದಿಂದ ರಕ್ಷಣಾ ಉತ್ಪಾದನಾ ಘಟಕವನ್ನು (Defence Manufacturing Unit) ಸ್ಥಾಪಿಸಬೇಕೆಂದು ಕೋರಿದರು. ಬೆಳಗಾವಿಯ ಸಮಗ್ರ ಬೆಳವಣಿಗೆ ಹಾಗೂ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ತಾವು ಸದಾ ಬದ್ಧರಾಗಿರುವುದಾಗಿ ಅಭಯ್ ಪಾಟೀಲ್ ಈ ಸಂದರ್ಭದಲ್ಲಿ ತಿಳಿಸಿದರು.
