Belagavi

ಗುರಿ, ಶಿಸ್ತು ಮತ್ತು ಸಾಧನೆಯಿಂದ ಯಶಸ್ಸು ಸಾಧ್ಯ: ಡಾ. ಸಿದ್ದು ಹುಲ್ಲೊಳ್ಳಿ

Share

“ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಶಿಸ್ತು, ಸಮಯಪಾಲನೆ ಹಾಗೂ ನಿರಂತರ ಪರಿಶ್ರಮವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಸಮಾಜ ಯಾವಾಗಲೂ ಸಾಧಕರನ್ನು ಮಾತ್ರ ಗುರುತಿಸುತ್ತದೆ. ಆದ್ದರಿಂದ ಪಠ್ಯದ ಜೊತೆಗೆ ಕ್ರೀಡೆ, ಸಂಘ ಹಾಗೂ ಕ್ಲಬ್ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು” ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೊಳ್ಳಿ ನುಡಿದರು.

ಕೆ.ಎಲ್.ಇ. ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2026–27ನೇ ಸಾಲಿನ ಕ್ರೀಡಾ, ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನವೇ ಯಶಸ್ಸಿನ ಮೂಲಮಂತ್ರ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಜೀವನದಲ್ಲಿ ಸಾಧಕರಾಗಿ. ತಂದೆ-ತಾಯಿಗೆ ಗೌರವ ನೀಡಿ. ನಿಮ್ಮ ಗುರುಗಳನ್ನು ಪೂಜ್ಯಭಾವದಿಂದ ಕಾಣಿರಿ. ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ. ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕಿ. ಎಲ್ಲಕ್ಕಿಂತ ಮುಖ್ಯವಾಗಿ, ಮೊದಲು ಒಳ್ಳೆಯ ಮನುಷ್ಯರಾಗಿರಿ. ಮನುಷ್ಯತ್ವಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮೂವರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕುಮಾರ. ಯೋಗರಾಜ್ ರಾಮಗೋನಗಟ್ಟಿ ಅವರು ಡಿಜಿ ಎನ್ಸಿಸಿ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಪಡೆದ ಸಾಧನೆಗಾಗಿ, ಕುಮಾರಿ.ಅಪೂರ್ವಾ ನಾಯಿಕ್ ಅವರು ರಾಷ್ಟ್ರೀಯ ಜೂನಿಯರ್ ಅಂಡರ್-20 ಅಥ್ಲೆಟಿಕ್ಸ್ನ 400 ಮೀಟರ್ ಹರ್ಡಲ್ಸ್ನಲ್ಲಿ ಕಂಚಿನ ಪದಕ ಹಾಗೂ ಕುಮಾರಿ.ಭವ್ಯ ಸಿ.ಜೆ. ಅವರು ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಸಾಧನೆಗಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಎಚ್. ಎಸ್. ಮೆಲಿನಮನಿ ವಹಿಸಿದ್ದರು. ಲಿಂಗರಾಜ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರು ಶ್ರೀಮತಿ ಗಿರಿಜಾ ಹಿರೇಮಠ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸಾರಿಕಾ ನಾಗರೆ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ. ರಾಮರಾವ್ ವಂದಿಸಿದರು. ವಿದ್ಯಾರ್ಥಿ ಅಕ್ಷಯ ಪಾಟೀಲ ಪ್ರಾರ್ಥಿಸಿದರು. ನಿಖಿತಾ ಬೆದರೆ ಹಾಗೂ ಸಿದ್ದನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Tags:

error: Content is protected !!