ಬೆಳಗಾವಿಯ ಗಾಂಧಿನಗರದ ರೈಲ್ವೆ ಮೇಲ್ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಸಡನ್ ಅಪಘಾತದಲ್ಲಿ ಅಪರಿಚಿತ ವೃದ್ಧರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಗುರುತು ಪತ್ತೆಗೆ ನೆರವಾಗುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಆಗಸ್ಟ್ 5 ರಂದು ಬೆಳಗಿನ ಜಾವ ಹಲಗಾದಿಂದ ಕಾಕತಿ ಕಡೆಗೆ ಎನ್.ಎಚ್ 48ರ ಮೇಲೆ ಮಲ್ಲೇಶಪ್ಪ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಗಾಂಧಿನಗರದ ರೇಲ್ವೆ ಬ್ರಿಡ್ಜ್ ಸಮೀಪ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಢಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ವಾಹನ ಸವಾರ ಮಲ್ಲೇಶಪ್ಪ ಅವರಿಗೂ ಗಾಯಗಳಾಗಿದ್ದು, ವಾಹನ ಸಮೇತ ಸ್ಥಳದಿಂದ ತೆರಳಿದ್ದಾರೆ. ತೀವ್ರ ಗಾಯಗೊಂಡಿದ್ದ ಸುಮಾರು 60 ರಿಂದ 65 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ವ್ಯಕ್ತಿಯು ಕೋಲು ಮುಖ, ದಪ್ಪ ಮೂಗು, ಗೋಧಿ ಬಣ್ಣದ ಮೈಬಣ್ಣ ಹೊಂದಿದ್ದು, ತಲೆಯಲ್ಲಿ 1 ಇಂಚು ಉದ್ದದ ಕಪ್ಪು-ಬಿಳಿ ಕೂದಲುಗಳಿವೆ. ಮೈಮೇಲೆ ಮರೂಣ ಬಣ್ಣದ ಅರ್ಧ ಶರ್ಟ್, ಕಪ್ಪು ಬಣ್ಣದ ನೈಲಾನ್ ನೈಟ ಪ್ಯಾಂಟ್ ಧರಿಸಿದ್ದು, ಬಲಗೈ ಮುಂಗೈಗೆ ಶಸ್ತ್ರಚಿಕಿತ್ಸೆಯಾಗಿದ್ದು ಮುಂಗೈ ಇರುವುದಿಲ್ಲ. ಸದ್ಯ ಮೃತದೇಹವನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ವಾರಸುದಾರರು ಯಾರಾದರೂ ಕಂಡುಬಂದಲ್ಲಿ ಉತ್ತರ ಸಂಚಾರ ಪೊಲೀಸ್ ಠಾಣೆ (0831-2405240 / 9480804103) ಅಥವಾ ಕಂಟ್ರೋಲ್ ರೂಮ್ (0831-2405278) ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.
