ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ವರುಣದೇವನನ್ನು ಒಲಿಸಿಕೊಂಡು ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ, ಅಡಹಳಟ್ಟಿ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ‘ಕಪ್ಪೆ ಮದುವೆ’ ನೆರವೇರಿಸಿದ್ದಾರೆ.
ಅಥಣಿ ತಾಲೂಕಿನ ಅಡಹಳಟ್ಟಿ ಗ್ರಾಮದಲ್ಲಿ ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗುವ ಭೀತಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಯುವಕರೆಲ್ಲರೂ ಒಂದಾಗಿ ಗ್ರಾಮದಲ್ಲಿ ನಂಬಿಕೆಯಂತೆ ವರುಣದೇವನಿಗೆ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದರು. ಹಿಂದೂ ಸಂಪ್ರದಾಯದಂತೆ ಕಪ್ಪೆಗಳಿಗೆ ಅರಿಶಿನ-ಕುಂಕುಮ ಹಚ್ಚಿ, ಮಂಗಲವಾದ್ಯಗಳೊಂದಿಗೆ ಅಕ್ಷತೆ ಕಾಳು ಹಾಕಿ ಶಾಸ್ತ್ರೋಕ್ತವಾಗಿ ಕಪ್ಪೆಗಳ ಮದುವೆ ನೆರವೇರಿಸಿ, ಶೀಘ್ರವೇ ಉತ್ತಮ ಮಳೆಯಾಗಲಿ ಎಂದು ಜನರೆಲ್ಲರೂ ಪ್ರಾರ್ಥಿಸಿದರು.

