ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಡ ಕುಟುಂಬಗಳಿಗೆ ಮೂಲಸೌಕರ್ಯ ಹಾಗೂ ಉತಾರ (ಎನ್‌ಒಸಿ) ನೀಡಲು ನಿರ್ಲಕ್ಷ್ಯ ವಹಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ವಿರುದ್ಧ ಕರವೇ (ಮಲ್ಲಿಕಾರ್ಜುನ ಬಣ) ಉಗ್ರ ಹೋರಾಟಕ್ಕಿಳಿದಿದೆ.

ಖಾನಾಪುರದ ಗಾಂಧಿನಗರದ 3ನೇ ಅಡ್ಡರಸ್ತೆಯಲ್ಲಿ ಕಳೆದ 40 ವರ್ಷಗಳಿಂದ ವಾಸಿಸುತ್ತಿರುವ ಅತ್ಯಂತ ಬಡ ಕುಟುಂಬವಾದ ಬಂಗಿಬೋಳ ಕುಟುಂಬಕ್ಕೆ ಈವರೆಗೂ ಪಂಚಾಯಿತಿಯಿಂದ ಯಾವುದೇ ರೀತಿಯ ಉತಾರ ಹಾಗೂ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ (ಮಲ್ಲಿಕಾರ್ಜುನ ಬಣ) ತೀವ್ರವಾಗಿ ಖಂಡಿಸಿದೆ. ಪಂಚಾಯಿತಿ ವ್ಯಾಪ್ತಿಯ ಇತರ ಜನರಿಗೆ ಉತಾರ ನೀಡಿರುವ ಪಿಡಿಒ, ಈ ಬಡ ಕುಟುಂಬದ ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ಸಾರ್ವಜನಿಕರ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ, ಸದರಿ ಅಧಿಕಾರಿಯ ಮೇಲೆ ಅನಧಿಕೃತ ಲೇಔಟ್ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ದೂರುಗಳಿದ್ದು, ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸದ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಕರವೇ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ ಹಾಗೂ ಪದಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಈ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಗದಿರಲು ರಾಜಕೀಯ ಕೈವಾಡವೇ ಕಾರಣ ಎಂದು ಕರವೇ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದ್ದು, ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ಮಲ್ಲಪ್ಪ ಗುಡಗೇನಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ನ್ಯಾಯ ಹಾಗೂ ಮೂಲಸೌಕರ್ಯ ಸಿಗುವವರೆಗೂ ಹಗಲು-ರಾತ್ರಿ ಧರಣಿ ಸತ್ಯಾಗ್ರಹವನ್ನು ಕೈಬಿಡುವುದಿಲ್ಲ ಎಂದು ಕರವೇ ಪ್ರತಿನಿಧಿ ಫರೀದಾ ನದಾಫ್ ಎಚ್ಚರಿಸಿದ್ದಾರೆ.
