ಭಾರತೀಯ ಸೇನೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ಅತ್ಯುತ್ತಮ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಮಹಾವೀರ ಸುರೇಂದ್ರ ಕೋಟೆ ಅವರು ತಮ್ಮ ಸ್ವಗ್ರಾಮ ಹಿರೆಕೋಡಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು, ಹಿತೈಷಿಗಳು ಹಾಗೂ ಸ್ನೇಹಿತರ ಬಳಗದಿಂದ ಅತ್ಯಂತ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.


ಯೋಧ ಮಹಾವೀರ ಕೋಟೆಯವರನ್ನು ತೆರದ ಜೀಪನಲ್ಲಿ ಹಿರೆಕೋಡಿ ಗ್ರಾಮಾದಾದ್ಯಂದತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಗ್ರಾಮದ ಸರ್ಕಾರಿ ಶಾಲೆಯಿಂದ ಪ್ರಾರಂಭಗೊಂಡ ಈ ಮೆರವಣಿಗೆಯು ಬಸದಿ, ಬಸ್ ನಿಲ್ದಾಣ, ಮಠ ಹಾಗೂ ಹನುಮಾನ್ ಮಂದಿರದ ಮಾರ್ಗವಾಗಿ ಸಾಗಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಗ್ರಾಮಸ್ಥರು ಹಾಗೂ ದೇಶಪ್ರೇಮಿಗಳು ಯೋಧನಿಗೆ ಮಾಲಾರ್ಪಣೆ ಮಾಡಿ, ಜಯಘೋಷಗಳನ್ನು ಕೂಗಿ ಸಂಭ್ರಮಿಸಿದರು.ದೇಶಕ್ಕೆ ಹೆಮ್ಮೆ ತಂದಿತ್ತ ‘ಆಪರೇಷನ್ ಸಿಂಧೂರ್’ ಯಶಸ್ವಿ ಕಾರ್ಯಾಚರಣೆಯಲ್ಲಿ ತಾಂತ್ರಿಕ ಸೇವೆ ಸಲ್ಲಿಸಿ ವಿಶೇಷ ಪದಕ (ಮೆಡಲ್) ಪಡೆದುಕೊಂಡಿರುವ ಮಹಾವೀರ ಕೋಟೆ ಅವರು, ದೇಶದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸಿ ಹಲವು ಪ್ರಮುಖ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಿರಿಮೆ ಹೊಂದಿದ್ದಾರೆ.

ಕಾರ್ಯಕ್ರಮದಲ್ಲಿ ಯೋಧ ಮಹಾವೀರ ಕೋಟೆ ಹಾಗೂ ಅವರ ಧರ್ಮಪತ್ನಿ ಅವರು ತಮ್ಮ ತಂದೆ-ತಾಯಿಗಳ ಪಾದಪೂಜೆ ನೆರವೇರಿಸಿ ಹಿರಿಯರ ಆಶೀರ್ವಾದ ಪಡೆದರು. ಇದೇ ವೇದಿಕೆಯಲ್ಲಿ ಮಹಾವೀರ ಅವರ ಗೆಳೆಯರ ಬಳಗದ ವತಿಯಿಂದ ಗುರುವಂದನಾ’ಕಾರ್ಯಕ್ರಮವನ್ನು ಹಮ್ಮಿಕೊಂಡು, ಅವರ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಬಾಲ್ಯದ ಸ್ನೇಹಿತ ಡಾ. ಸಚಿನ್ ಮೇಕ್ಕಳಕಿ ಮಾತನಾಡಿ ಮಹಾವೀರ ಕೋಟೆ ಅವರು ಸೇನೆಯಲ್ಲಿ 23 ವರ್ಷ ಸೇವೆ ಸಲ್ಲಿಸಿ ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಆಪರೇಷನ್ ಸಿಂಧೂರ್’ ನಂತಹ ಪ್ರತಿಷ್ಠಿತ ಕಾರ್ಯಾಚರಣೆಯಲ್ಲಿ ತಾಂತ್ರಿಕ ಸೇವೆ ಸಲ್ಲಿಸಿ ಪದಕ ಪಡೆದಿರುವುದು ಸಣ್ಣ ವಿಷಯವಲ್ಲ. ಅವರ ಮುಂದಿನ ಭವಿಷ್ಯದ ಜೀವನ ಸುಖ-ಶಾಂತಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ಬಳಿಕ ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ ಮಾತನಾಡಿ ಮಹಾವೀರ ಕೋಟೆಯವರು 23 ವರ್ಷಗಳ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿರುವುದು ಸಂತಸದ ಸಂಗತಿ.ಅವರ ಮುಂದಿನ ಜೀವನ ಸುಖ,ಶಾಂತಿ,ನೆಮ್ಮದಿಯಿಂದ ಕೊಡಿರಲಿ ಎಂದು ಹಾರೈಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಿರೆಕೋಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಮಹಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ದಕ್ಷಿಣ ಭಾರತ ಜೈನ ಸಭೆಯ ಬೆಳಗಾವಿ ಘಟಕದ ಪದಾಧಿಕಾರಿಗಳು ಭಾಗವಹಿಸಿ ನಿವೃತ್ತ ಯೋಧ ಮಹಾವೀರ ಕೋಟೆ ಅವರನ್ನು ಸನ್ಮಾನಿಸಿದರು.

ಬಳಿಕ ನಿವೃತ್ತ ಯೋಧ ಮಹಾವೀರ ಕೋಟೆ ಮಾತನಾಡಿ 23 ವರ್ಷಗಳ ಸೇನೆಯಲ್ಲಿ ಕಾರ್ಯನಿರ್ವಹಿಸಿರುವುದು ಸಂತಸ ತಂದಿದೆ.ಸೇನೆಯಲ್ಲಿ ಇದ್ದಾಗ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳ ಎಂದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸುರೇಶ ಚೌಗಲಾ, ಅಜಿತ ಘೋಸರವಾಡೆ, ಸುಭಾಶ ಚೌಗಲಾ, ಭರತ ದೇವೆಡಕರ, ರೇವಯ್ಯ ಹಿರೇಮಠ, ಬಾಬರ ಪಟೇಲ, ಶಿಕ್ಷಕರು, ಯೋಧನ ಕುಟುಂಬಸ್ಥರು, ಸ್ನೇಹಿತರ ಬಳಗ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
