ಖಾನಾಪುರ ತಾಲೂಕಿನ ಪಶ್ಚಿಮ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಾಲಾತ್ರಿ ನದಿ ಉಕ್ಕಿ ಹರಿಯುತ್ತಿದ್ದು, ಖಾನಾಪುರ–ಹೇಮಾಡಗಾ ರಸ್ತೆಯ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಮೇಲೆ ಸುಮಾರು ಮೂರು ಅಡಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಮಲಪ್ರಭಾ ನದಿಯ ನೀರಿನ ಮಟ್ಟವೂ ಗಣನೀಯವಾಗಿ ಏರಿಕೆಯಾಗಿದ್ದು, ಹಾಲಾತ್ರಿ ನದಿಯ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮೇಲೆ ಪ್ರಬಲವಾಗಿ ನೀರು ಹರಿಯುತ್ತಿರುವುದರಿಂದ ಸವಾರರು ಪ್ರಾಣಾಪಾಯ ತಂದೊಡ್ಡುವ ಸಾಹಸಕ್ಕೆ ಕೈಹಾಕಬಾರದು ಎಂದು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಪರಿಸ್ಥಿತಿ ತಿಳಿಯಾಗಿ ಸಂಚಾರ ಪುನರಾರಂಭಗೊಳ್ಳುವವರೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರು ಖಾನಾಪುರ–ಅಸೋಗಾ–ಮಂತುರ್ಗಾ–ಹೇಮಾಡಗಾ ಅಥವಾ ಖಾನಾಪುರ–ಲೋಂಡಾ–ರಾಮನಗರ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ತಾಲೂಕು ಆಡಳಿತ ಸೂಚಿಸಿದೆ.
