ನೆರೆ ರಾಜ್ಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕುಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣಾ ನದಿಗೆ ಪ್ರಸ್ತುತ 1 ಲಕ್ಷದ 33 ಸಾವಿರ ಕ್ಯೂಸೆಕ್ ಬೃಹತ್ ಪ್ರಮಾಣದ ಒಳಹರಿವು ದಾಖಲಾಗಿದ್ದು, ನದಿಗಳು ದಂಡೆ ಮೀರಿ ಹರಿಯುತ್ತಿವೆ.

ಮಹಾರಾಷ್ಟ್ರದ ಕೊಯ್ನಾ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ನದಿಗೆ ಸುಮಾರು 33 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಗಡಿ ಭಾಗದ ಕೃಷ್ಣಾ, ದೂಧ್‌ಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ನದಿಯ ನೀರಿನ ಮಟ್ಟ ಏರಿದ್ದರಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 9 ಪ್ರಮುಖ ಸೇತುವೆಗಳು ಜಲಾವೃತಗೊಂಡಿವೆ.ಉಗಾರ-ಕುಡಚಿ ಸೇತುವೆಯು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.ಸುತ್ತಮುತ್ತಲಿನ ಹಳ್ಳಿಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
