ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ಖಲೀಲ್ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪತ್ನಿಯ ದೂರಿನನ್ವಯ ಠಾಣೆಗೆ ಕರೆತರಲಾಗಿದ್ದ ಈತನಿಗೆ ಫಿಟ್ಸ್ ಬಂದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದರೆ, ಲಾಕಪ್ ಡೆತ್ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಎಸ್ಪಿ ಜಾಹ್ನವಿ ಹಾಗೂ ಶಾಸಕ ನೇಮಿರಾಜ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಕಟ್ಟಡ ಕಾರ್ಮಿಕ ಖಲೀಲ್ (38) ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮೂಲತಃ ಹರಪನಹಳ್ಳಿಯ ಖಲೀಲ್, ನಂದಿಪುರದ ಯುವತಿಯನ್ನು ಮದುವೆಯಾಗಿ ಹಗರಿಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದ. ನಿನ್ನೆ ರಾತ್ರಿ ದಂಪತಿ ನಡುವೆ ಜಗಳ ವಿಕೋಪಕ್ಕೆ ತಿರುಗಿದಾಗ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಖಲೀಲ್ನನ್ನು ವಿಚಾರಣೆಗೆಂದು ಠಾಣೆಗೆ ಕರೆತಂದಿದ್ದರು. ಈ ವೇಳೆ ಖಲೀಲ್ ಸಾವನ್ನಪ್ಪಿದ್ದು, ಆತನಿಗೆ ಫಿಟ್ಸ್ (ಅಪಸ್ಮಾರ) ಬಂದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ಶವಪರೀಕ್ಷೆಗೆ ರವಾನಿಸಲಾಗಿದೆ.
ಠಾಣೆಯಲ್ಲೇ ವ್ಯಕ್ತಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಬಳಿ ನೂರಾರು ಸಾರ್ವಜನಿಕರು ಹಾಗೂ ಸಚಿವರು-ನಾಯಕರು ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಮೀಸಲು ಪೊಲೀಸ್ ಪಡೆ (KSISF/DAR) ನಿಯೋಜಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಎಸ್ಪಿ ಎಸ್. ಜಾಹ್ನವಿ ಹಾಗೂ ಸ್ಥಳೀಯ ಶಾಸಕ ನೇಮಿರಾಜ್ ನಾಯ್ಕ್ ಠಾಣೆಗೆ ಭೇಟಿ ನೀಡಿ ಘಟನೆಯ ಕುರಿತು ಸುದೀರ್ಘ ಪರಿಶೀಲನೆ ನಡೆಸಿದರು. ಘಟನೆಗೆ ನಿಖರ ಕಾರಣ ತಿಳಿಯಲು ಶವಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.

