kagawad

ಕಾಗವಾಡ: ಮಧ್ಯಾಹ್ನದ ಬಿಸಿಊಟ ತಯಾರಿಸುವ ಅಡುಗೆ ಸಿಬ್ಬಂದಿಗೆ ವೈದ್ಯಾಧಿಕಾರಿಗಳಿಂದ ಮಹತ್ವದ ಸಲಹೆ

Share

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ನೀಡುತ್ತಿರುವ ಪೌಷ್ಟಿಕ ಆಹಾರವನ್ನು ತಯಾರಿಸುವಾಗ ಪ್ರತಿಯೊಬ್ಬ ಸಿಬ್ಬಂದಿಯೂ ಸ್ವಚ್ಛತೆಯನ್ನು ಕಡ್ಡಾಯವಾಗಿ ಕಾಪಾಡಬೇಕು. ಅಡುಗೆಗೆ ಬಳಸುವ ಎಲ್ಲಾ ಕಾಯಿಪಲ್ಲೆ ಹಾಗೂ ಆಹಾರ ಪದಾರ್ಥಗಳನ್ನು ಶುದ್ಧೀಕರಿಸಿ ಅಡುಗೆ ಮಾಡಿದಾಗ ಮಾತ್ರ ಉತ್ತಮ ಪೌಷ್ಟಿಕ ಆಹಾರ ನಿರ್ಮಾಣಗೊಳ್ಳಲು ಸಾಧ್ಯ ಎಂದು ಅಥಣಿ ಹಾಗೂ ಕಾಗವಾಡ ತಾಲೂಕು ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಬಿಸಿಊಟ ಹಾಗೂ ಪೌಷ್ಟಿಕ ಆಹಾರವನ್ನು ತಯಾರಿಸುವಾಗ ಪ್ರತಿಯೊಬ್ಬ ಮಹಿಳಾ ಸಿಬ್ಬಂದಿಯೂ ಕಟ್ಟುನಿಟ್ಟಿನ ಜವಾಬ್ದಾರಿ ವಹಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿ, ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಹೇಳಿದರು.

ಶನಿವಾರ ಸಂಜೆ ಉಗಾರ್ ಖುರ್ದ್‌ನ ವಿಹಾರ ಸಭಾಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಮಧ್ಯಾಹ್ನದ ಉಪಹಾರ ಯೋಜನೆಯಡಿ ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ಡಾ. ಬಸಗೌಡ ಕಾಗೆ ಅವರು ಸ್ವಚ್ಛತೆಯ ಕುರಿತು ವಿಶೇಷ ಮಾಹಿತಿ ನೀಡಿದರು. ಆಹಾರ ತಯಾರಿಸುವ ಮುನ್ನ ಕನಿಷ್ಠ 30 ಸೆಕೆಂಡುಗಳ ಕಾಲ ಕೈಗಳನ್ನು ಯಾವ ರೀತಿ ಸ್ವಚ್ಛಗೊಳಿಸಬೇಕು, ಅಡುಗೆಗೆ ಬಳಸುವ ಕಾಯಿಪಲ್ಲೆ ಹಾಗೂ ಸಾಮಗ್ರಿಗಳನ್ನು ಹೇಗೆ ಶುಚಿತ್ವದಿಂದ ಬಳಸಬೇಕು ಮತ್ತು ಅಡುಗೆ ಮಾಡುವ ಪರಿಸರ ಎಷ್ಟು ಸ್ವಚ್ಛವಾಗಿರಬೇಕು ಎಂಬುದರ ಕುರಿತು ವಿವರಣೆ ನೀಡಿದರು. ಇದರೊಂದಿಗೆ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು; ಗರ್ಭಾಶಯ ಹಾಗೂ ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರ ವಹಿಸಬೇಕು ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಸರ್ಕಾರ ನೀಡುತ್ತಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ತರಬೇತಿ ಕಾರ್ಯಗಾರದಲ್ಲಿ 300ಕ್ಕೂ ಹೆಚ್ಚು ಮಹಿಳಾ ಅಡುಗೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಬೆಳಿಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಿಗರಾಮ ಹಾಗೂ ಸಮನ್ವಯಾಧಿಕಾರಿ ಪಾಂಡುರಂಗ ಮದಭಾವಿ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಿಕ್ಷಣಾಧಿಕಾರಿ ಚೆನ್ನಿಗರಾಮ, “ಶಿಕ್ಷಣ ಇಲಾಖೆಯು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ನೀಡಲು ಶ್ರಮಿಸುತ್ತಿದೆ. ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಹಾಗೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿ ಎಂಬುದೇ ಇದರ ಮೂಲ ಉದ್ದೇಶವಾಗಿದೆ. ಅಡುಗೆ ತಯಾರಿಸುವ ನೀವು ಗುಣಮಟ್ಟದ ಆಹಾರ ನಿರ್ಮಿಸಿ ಸ್ವಚ್ಛತೆ ಕಾಪಾಡಿಕೊಂಡರೆ ಸರ್ಕಾರದ ಯೋಜನೆಗೆ ಕೈಜೋಡಿಸಿದಂತಾಗುತ್ತದೆ. ಇದರಲ್ಲಿ ಕರ್ತವ್ಯಲೋಪ ಎಸಗುವವರ ವಿರುದ್ಧ ಇಲಾಖೆಯು ಸೂಕ್ತ ಕ್ರಮ ಜರುಗಿಸಲಿದೆ” ಎಂದು ಎಚ್ಚರಿಕೆ ನೀಡಿದರು.

ಪೋಷಣ್ ಅಭಿಯಾನದ ತಾಲೂಕು ನಿರ್ದೇಶಕರಾದ ಮಲ್ಲಿಕಾರ್ಜುನ್ ನಾಮದಾರ್ ಅವರು ಸುಲಭ ಉದಾಹರಣೆಗಳ ಮೂಲಕ ಪ್ರತಿಯೊಬ್ಬರ ಕರ್ತವ್ಯದ ಕುರಿತು ಅರಿವು ಮೂಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ತಾಯಕ್ಕ ತ್ರಿಕಾಣಿ, ಮುಖ್ಯ ಶಿಕ್ಷಕ ಡಿ. ಆರ್. ಜಾದವ್, ಪ್ರಕಾಶ್ ಇನಾಮ್ದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!