ಕಿತ್ತೂರು ಕ್ಷೇತ್ರದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರಗಳ ನಿರ್ಮಾಣ ಕಾಮಗಾರಿಯಲ್ಲಿ ಸರ್ಕಾರದ ಪ್ರೋಟೋಕಾಲ್ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೈಲಹೊಂಗಲದ THO ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ ಅವರು ನಿಯಮಗಳನ್ನು ಗಾಳಿಗೆ ತೂರಿ ರಾಜಕೀಯ ಪ್ರಚಾರ ಪಡೆಯುತ್ತಿದ್ದಾರೆ ಎಂದು ಬಿಜೆಪಿ ನಾಯಕಿ ಲಕ್ಷ್ಮಿ ಇನಾಮದಾರ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿರುವ ತಾಲೂಕು ಆರೋಗ್ಯ ವೈದ್ಯಾಧಿಕಾರಿ (THO) ಕಚೇರಿಗೆ ಕಿತ್ತೂರು ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದಿಢೀರ್ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಶೇಕಡಾ 65 ಮತ್ತು ರಾಜ್ಯ ಸರ್ಕಾರದ ಶೇಕಡಾ 35ರಷ್ಟು ಅನುದಾನದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಈ ಯೋಜನೆಗಳ ಭೂಮಿಪೂಜೆ ಹಾಗೂ ಇತರ ಕಾರ್ಯಕ್ರಮಗಳನ್ನು ನೆರವೇರಿಸುವಾಗ ಸರ್ಕಾರದ ನಿಯಮಾನುಸಾರ ಪ್ರೋಟೋಕಾಲ್ ಪಾಲಿಸುತ್ತಿಲ್ಲ. ವಿಶೇಷವಾಗಿ, ಉತ್ತರ ಕನ್ನಡ (ಕೆನರಾ) ಲೋಕಸಭಾ ಕ್ಷೇತ್ರದ ಸಂಸದರಿಗೂ ಹಾಗೂ ಸಂಬಂಧಪಟ್ಟ ಇತರ ಜನಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಮಹಿಳಾ ಮುಖಂಡೆ ಲಕ್ಷ್ಮಿ ಇನಾಮದಾರ, ಕಿತ್ತೂರು ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ ಅವರು ಸರ್ಕಾರಿ ಕಾರ್ಯಕ್ರಮಗಳನ್ನು ತಮ್ಮ ಸ್ವಂತ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಸ್ಥಳೀಯ ಬಿಜೆಪಿ ನಾಯಕರನ್ನು ಹಾಗೂ ಜನಪ್ರತಿನಿಧಿಗಳನ್ನು ಕಡೆಗಣಿಸಿ ಶಾಸಕರು ತಾವೇ ಭೂಮಿಪೂಜೆ ನೆರವೇರಿಸುತ್ತಿರುವುದು ಖಂಡನೀಯ ಎಂದರು. ಅಷ್ಟೇ ಅಲ್ಲದೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಶಾಸಕರ ಜೊತೆ ಕೈಜೋಡಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ಇನ್ಮುಂದೆ ಸರ್ಕಾರಿ ಕಾಮಗಾರಿಗಳಲ್ಲಿ ನಿಯಮಾನುಸಾರ ಪ್ರೋಟೋಕಾಲ್ ಪಾಲಿಸಲೇಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

