M K HUBLI

M.K. ಹುಬ್ಬಳ್ಳಿಯಲ್ಲಿ ಸಿಸಿ ಕ್ಯಾಮೆರಾ ದಂಡದ ವಿರುದ್ಧ ಬೃಹತ್ ಪ್ರತಿಭಟನೆ: ಎಸ್‌ಪಿ ಕಚೇರಿ ಮುತ್ತಿಗೆಗೆ ಎಚ್ಚರಿಕೆ!

Share

ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೈಲಹೊಂಗಲ ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳಿಂದ ನಿರಂತರವಾಗಿ ದಂಡ ವಿಧಿಸುತ್ತಿರುವುದನ್ನು ಖಂಡಿಸಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಹೊಲಕ್ಕೆ ಹೋಗುವ ರೈತರು, ಶಾಲಾ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರಿಗೆ ಅನಗತ್ಯ ದಂಡ ವಿಧಿಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿ ಬೈಲಹೊಂಗಲ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಬೈಲಹೊಂಗಲ ರಸ್ತೆಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳಿಂದ ಸಾರ್ವಜನಿಕರ ಮೊಬೈಲ್‌ಗಳಿಗೆ ನಿರಂತರವಾಗಿ ದಂಡದ ಸಂದೇಶಗಳು ಬರುತ್ತಿದ್ದು, ಸ್ಥಳೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೊಲಕ್ಕೆ ಹೋಗುವ ರೈತರಿಗೂ ಹೆಲ್ಮೆಟ್ ಧರಿಸಿಲ್ಲವೆಂದು ಪದೇ ಪದೇ ₹500 ದಂಡ ವಿಧಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸ್ಥಳೀಯ ರೈತರು, ಪೋಷಕರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಯಮಗಳನ್ನು ಸಡಲಿಸಬೇಕು ಹಾಗೂ ದಂಡ ವಿಧಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ, ಪೊಲೀಸ್ ಅಧಿಕಾರಿಗಳ ಮೂಲಕ ಬೈಲಹೊಂಗಲ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ, ಒಂದು ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಬೆಳಗಾವಿ ಎಸ್‌ಪಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಮಾತನಾಡಿ, ಸಿಸಿ ಕ್ಯಾಮೆರಾ ನೆಪದಲ್ಲಿ ಸಾರ್ವಜನಿಕರ ಶೋಷಣೆ ತಡೆಯಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಪೊಲೀಸರು ಹಾಗೂ ASI ಬಸಪ್ಪ ಉಪ್ಪಾರಟ್ಟಿ ಅವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅದೃಶ್ಯ ಹಿಂಡಲಗಿ, ರೈತ ಮುಖಂಡ ರುದ್ರಪ್ಪ ಕೊಡಲಿ, ಭೀಮಪ್ಪ ಗೂಡೆನ್ನವರ್, ಮುಷ್ತಾಕ್ ಸಾಹೇಬಖಾನ್, ರಂಗನಾಥ್ ಚಲವಾದಿ, ಬಾಳಪ್ಪ ಪಾಗಾದ್, ದಾದಾಪೀರ್ ಸವದತ್ತಿ, ಮುಡಕಪ್ಪ ಮುಗದನ್ನವರ್, ಬಸವರಾಜ ಮಾದರ, ಜ್ಯೋತಿಬಾ ಪಾಗಾದ್, ಕಾರ್ತಿಕ್ ತಳವಾರ ಸೇರಿದಂತೆ ಪಟ್ಟಣದ ಸಮಸ್ತ ಸಾರ್ವಜನಿಕರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!