ಬೆಳಗಾವಿ ತಾಲೂಕಿನ ಕಾಳೇನಟ್ಟಿ ಹಾಗೂ ಅಂಕಲಗಿ ಗ್ರಾಮಗಳಲ್ಲಿ ನೆನೆಗುದಿಗೆ ಬಿದ್ದಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ‘ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ’ದಿಂದ ಬೆಳಗಾವಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್ಪಿಯವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.


ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ಅಧ್ಯಕ್ಷ ಮಹೇಶ್ ಶಿಗಿಹಳ್ಳಿ ಅವರ ನೇತೃತ್ವದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಬೆಳಗಾವಿಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO), ಎಸ್ಪಿ ಸೇರಿದಂತೆ ತಾಲೂಕು ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಬೆಳಗಾವಿ ತಾಲೂಕಿನ ಕಾಳೇನಟ್ಟಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ, ಸ್ಮಶಾನ ಭೂಮಿ ಹಾಗೂ ಶಾಲಾ ಮಕ್ಕಳಿಗೆ ಸೂಕ್ತ ಆಟದ ಮೈದಾನವಿಲ್ಲದೆ ಯುವಕರು ಮತ್ತು ಹಿರಿಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಈ ವೇಳೆ ಮಹೇಶ್ ಶಿಗಿಹಳ್ಳಿ ಅಧಿಕಾರಿಗಳ ಗಮನಕ್ಕೆ ತಂದರು.ಅಲ್ಲದೆ, ಅಂಕಲಗಿ ಗ್ರಾಮದಲ್ಲಿ ಕಳೆದೆರಡು ದಶಕಗಳ ಹಿಂದೆ ಅಂದರೆ ಬರೋಬ್ಬರಿ 15 ವರ್ಷಗಳ ಹಿಂದೆ ಮಂಜೂರಾಗಿದ್ದ ವಾಲ್ಮೀಕಿ ಭವನದ ನಿರ್ಮಾಣ ಕಾಮಗಾರಿಯು ಅರ್ಧಕ್ಕೇ ನಿಂತು ಅಸಂಪೂರ್ಣಗೊಂಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎರಡೂ ಗ್ರಾಮಗಳ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ ಯುವ ಘಟಕದ ಪದಾಧಿಕಾರಿಗಳು, ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಮನವಿ ಮೂಲಕ ಎಚ್ಚರಿಸಿದ್ದಾರೆ.
